ಅನಿರೀಕ್ಷಿತವಾಗಿ, ದಿಢೀರನೆ ಕಷ್ಟಗಳು, ಆಪತ್ತುಗಳು ಬಂದೆರಗಿದಾಗ ಮನುಷ್ಯ ಕಂಗೆಡುವುದು ಸ್ವಾಭಾವಿಕ. ಇಂಥ ಹೊತ್ತಲ್ಲಿ ಕಷ್ಟವನ್ನು ಸೋಲಿಸಲು ಮಾನವೀಯತೆಯ ಸ್ಪಂದನೆ, ಸಹಕಾರ ಅತ್ಯಂತ ಅವಶ್ಯ. ಕರೊನಾ ಸೋಂಕಿನ ಪರಿಣಾಮ ಇಡೀ ದೇಶ 21 ದಿನಗಳ ಕಾಲ ದಿಗ್ಬಂಧನ(ಲಾಕ್ಡೌನ್)ದಲ್ಲಿದೆ. ವಲಸಿಗ ಕಾರ್ವಿುಕರು ಪಡುತ್ತಿರುವ ಪಾಡು ದಿನನಿತ್ಯ ನೋಡುತ್ತಿದ್ದೇವೆ. ಅಲ್ಲದೆ, ಹೋಟೆಲ್, ಕ್ಯಾಂಟೀನ್, ರೆಸ್ಟೋರೆಂಟ್, ಗೂಡಂಗಡಿಗಳು ಬಾಗಿಲು ಮುಚ್ಚಿರುವ ಪರಿಣಾಮ ಸಾವಿರಾರು ನಿರ್ಗತಿಕರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ದಿನದ ದುಡಿಮೆಯನ್ನೇ ನಂಬಿದ ಲಕ್ಷಾಂತರ ಜನ ಕಷ್ಟಕ್ಕೆ ಸಿಲುಕಿದ್ದಾರೆ, ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ಸವಾಲು ಇವರಿಗೆ ಇನ್ನಿಲ್ಲದಂತೆ ಕಾಡುತ್ತಿದೆ. ಭಾರತೀಯ ಸಂಸ್ಕೃತಿಯ ಜೀವನಧರ್ಮ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಸಿದೆ. ನೈಸರ್ಗಿಕ ವಿಕೋಪಗಳಿರಲಿ ಅಥವಾ ಇತರೆ ತುರ್ತು ಸಂದರ್ಭಗಳಿರಲಿ ಅಂಥ ಹೊತ್ತಲ್ಲಿ ಸಂಕಷ್ಟದಲ್ಲಿ ಇರುವವರ ನೆರವಿಗೆ ನಿಲ್ಲುವ ಮೂಲಕ ಮಾನವೀಯತೆ ತೋರುವವರ ಸಂಖ್ಯೆಗೆ ನಮ್ಮಲ್ಲೇನು ಕಡಿಮೆಯಿಲ್ಲ.
ಕರೊನಾ ಸಂಕಷ್ಟದ ಹೊತ್ತಲ್ಲೂ ಇದು ಮತ್ತೆ ಸ್ಪಷ್ಟವಾಗಿದೆ. ಕರ್ನಾಟಕದ ನಿದರ್ಶನವನ್ನೇ ಪರಿಗಣಿಸುವುದಾದರೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅದಮ್ಯ ಚೇತನ, ಅಕ್ಷಯಪಾತ್ರಾ ಮತ್ತು ನಮ್ಮ ಬೆಂಗಳೂರು ಫೌಂಡೇಷನ್(ಎನ್ಬಿಎಫ್), ರಾಷ್ಟ್ರೀಯ ಸ್ವಯಂಸೇವಕ ಸಂಘ ನೇರವಾಗಿ ಕಾರ್ವಿುಕರು ಇರುವ ಸ್ಥಳಗಳಿಗೇ ಹೋಗಿ ಆಹಾರ ನೀಡಿ ಹಸಿದವರ ಹೊಟ್ಟೆ ತುಂಬಿಸುತ್ತಿವೆ. ಮತ್ತೆ ಕೆಲ ಸಂಘಟನೆಗಳು ಆಹಾರಧಾನ್ಯ ಒದಗಿಸುತ್ತಿದ್ದರೆ, ಇನ್ನು ಕೆಲವು ಆಹಾರ ತಯಾರಿಸಿ ಪೊಟ್ಟಣಗಳಲ್ಲಿ ವಿತರಿಸುತ್ತಿವೆ. ಆಯಾ ಜಿಲ್ಲೆಗಳಲ್ಲಿ ಕೂಡ ಜನಪರ ಕಾಳಜಿಯುಳ್ಳ ಸಂಸ್ಥೆ, ಸಂಘಟನೆಗಳು, ಜನಸಾಮಾನ್ಯರು ನೆರವಿನ ಹಸ್ತ ಚಾಚುತ್ತಿದ್ದಾರೆ. ಧಾರವಾಡದಲ್ಲಂತೂ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯವರೇ ಕಾರ್ವಿುಕರಿಗೆ ಊಟ ಬಡಿಸಿ, ಕಾಳಜಿ ಮೆರೆದಿದ್ದಾರೆ. ಹೀಗೆ ಪರಸ್ಪರರ ಸಹಕಾರದ ಬಲದಿಂದಲೇ ಕಷ್ಟಗಳನ್ನು ಕಳೆಯಲು ಸಾಧ್ಯ. ಇವರೆಲ್ಲರ ಸೇವೆ, ಈ ಹೊತ್ತಲ್ಲಿ ತೋರುತ್ತಿರುವ ಕಳಕಳಿ ನಿಜಕ್ಕೂ ಪ್ರಶಂಸನೀಯ. ಮುಖ್ಯವಾಗಿ, ನೈಸರ್ಗಿಕ ವಿಕೋಪಗಳ ಹೊತ್ತಲ್ಲಿ ನೆರವಿಗೆ ಧಾವಿಸುವಂತೆ ಈ ಬಾರಿಯ ಸ್ಥಿತಿ ಇಲ್ಲ. ಪರಿಸ್ಥಿತಿ ತುಂಬ ಸೂಕ್ಷ್ಮವಾಗಿದೆ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯ ಇರುವುದರಿಂದ ತುಂಬ ಮುಂಜಾಗ್ರತೆ ವಹಿಸಿ, ಕೆಲವರು ಮಾತ್ರ ಇಂಥ ನೆರವಿನ ಕಾರ್ಯದ ಉಸ್ತುವಾರಿ ವಹಿಸಬೇಕಾಗುತ್ತದೆ.
ಇನ್ನು, ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಮತ್ತು ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೋರಿವೆ. ಇದಕ್ಕೆ ಸ್ಪಂದಿಸಿ ವಿವಿಧ ಖ್ಯಾತನಾಮರು, ಹಲವು ಕ್ಷೇತ್ರಗಳ ಸಾಧಕರು, ಕ್ರೀಡಾಪಟುಗಳು, ಮಠಾಧೀಶರು ದೇಣಿಗೆ ರೂಪದಲ್ಲಿ ನೆರವು ನೀಡುತ್ತಿದ್ದಾರೆ. ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿರುವುದರಿಂದ ಮತ್ತು ಇದೇ ಪರಿಸ್ಥಿತಿಯಲ್ಲಿ ಇನ್ನೂ ಹದಿನೈದು ದಿನ ಮುಂದುವರಿಯಬೇಕಿರುವುದರಿಂದ ನೆರವಿನ ಹಸ್ತಗಳು ಹೆಚ್ಚಬೇಕಿವೆ. ಹಿಂದೆಲ್ಲ ಪ್ಲೇಗು, ಭೂಕಂಪ, ನೆರೆ, ಬರ ಸೇರಿದಂತೆ ಇತರೆ ಮಹಾಮಾರಿಗಳು ಆವರಿಸಿಕೊಂಡಾಗ ಎಲ್ಲರೂ ಒಟ್ಟಾಗಿಯೇ ಮತ್ತು ಮಾನವೀಯ ಸಂವೇದನೆಯಿಂದಲೇ ಆ ಕಷ್ಟಗಳಿಂದ ಗೆದ್ದು ಬಂದಿದ್ದರು. ಕರೊನಾ ವಿರುದ್ಧ ಕೂಡ ನಿರ್ಣಾಯಕ ಗೆಲುವು ಸಿಗಬೇಕಿದ್ದು, ಜನಸಾಮಾನ್ಯರು ಮನೆಯಲ್ಲೇ ಇರುವ ಮೂಲಕ ಇದಕ್ಕೆ ಸಹಕರಿಸಲಿ. ಪರಿಹಾರ ನಿಧಿಗಳಿಗೆ ನೆರವಾಗುವ ಮೂಲಕ ಸಾರ್ಥಕತೆ ಹೊಂದಲಿ.