ನ್ಯೂಸ್

ಸಭ್ಯತೆ, ಸಂಯಮ ಇರಲಿ: ಸಾರ್ವಜನಿಕ ಜೀವನದಲ್ಲಿ ಇರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು

ರಮೇಶ್​ ಕುಮಾರ್​​ ಬಿ ಎಡಮೋಳೆ

ವಿವಾದಾತ್ಮಕ ಹೇಳಿಕೆಗಳಿಂದಲೇ ಕೆಲ ರಾಜಕೀಯ ನಾಯಕರು ಸುದ್ದಿಯಲ್ಲಿ ಇರುತ್ತಾರೆ. ತಾವು ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ, ಅದರಿಂದ ಆಗುವ ಪರಿಣಾಮವೇನು, ಜನರು ಅದನ್ನು ಹೇಗೆ ಸ್ವೀಕರಿಸಬಹುದು- ಈ ಯಾವುದೇ ಸಂಗತಿಗಳ ಬಗ್ಗೆ ಯೋಚಿಸದೆ ಹೇಳಿಕೆ ನೀಡುತ್ತಾರೆ. ಆ ಬಳಿಕ ತಾನು ಹಾಗೆ ಹೇಳೇ ಇಲ್ಲ, ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂಬ ಮತ್ತೊಂದು ಸುಳ್ಳನ್ನು ಜೋಡಿಸುತ್ತಾರೆ. ಆದರೆ, ವಿವಾದದ ಕಿಡಿ ತೀವ್ರ ಸ್ವರೂಪ ಪಡೆದುಕೊಂಡಾಗ ಬಹಿರಂಗವಾಗಿ ಕ್ಷಮೆಯಾಚಿಸಿದ ನಿದರ್ಶನಗಳಿಗೆ ಕೊರತೆ ಏನಿಲ್ಲ. ಈ ಸಾಲಿಗೆ ಈಗ ಹೊಸ ಸೇರ್ಪಡೆ ಪ್ರಧಾನಿ ಸ್ಥಾನದ ಆಕಾಂಕ್ಷಿ ಆಗಿರುವ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್​ಕುಮಾರ್. ಜನಸಂಖ್ಯೆ ನಿಯಂತ್ರಣ ಸಾಧ್ಯವಾಗದಿರುವುದಕ್ಕೆ, ಮಹಿಳೆಯರು ಕಡಿಮೆ ಓದಿರುವುದೇ ಕಾರಣ ಎಂಬರ್ಥದಲ್ಲಿ ವಿಧಾನಸಭೆಯಲ್ಲಿ ಮಾತನಾಡಿ, ಕೆಲ ಆಕ್ಷೇಪಾರ್ಹ ಸಂಗತಿಗಳನ್ನೂ ನಿತೀಶ್ ಪ್ರಸ್ತಾಪಿಸಿದ್ದರು. ಸಾರ್ವಜನಿಕ ವಲಯದಲ್ಲಿ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಮತ್ತು ವಿರೋಧ ಪಕ್ಷಗಳು ‘ನಿತೀಶ್ ಮಹಿಳಾ ವಿರೋಧಿ’ ಎಂದು ಬಿಂಬಿಸಲು ಆರಂಭಿಸುತ್ತಿದ್ದಂತೆ ಬುಧವಾರ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ನಿತೀಶ್​ಕುಮಾರ್ ಅನುಭವಿ ರಾಜಕಾರಣಿ. ಸೂಕ್ಷ್ಮ ವಿಷಯಗಳ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲದಿರುವುದೇನಲ್ಲ. ಆದರೂ, ಸಭ್ಯತೆಯ ಲಕ್ಷ್ಮಣರೇಖೆಯನ್ನು ದಾಟಿದ್ದು ಸೂಕ್ತವಲ್ಲ. ಇಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಜನರ ಭಾವನೆಗಳಿಗೆ ಘಾಸಿಯಾಗುವ ಸಂಗತಿಯನ್ನು ರಾಜಕೀಯ ನಾಯಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ವಿಪರ್ಯಾಸ. ಸನಾತನ ಧರ್ಮದ ವಿಷಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ನೀಡಿದ ಹೇಳಿಕೆ ಭಾರಿ ವಿರೋಧಕ್ಕೆ ಕಾರಣವಾಗಿದೆ. ಆದರೂ, ಕ್ಷಮೆ ಕೇಳದೆ, ರಾಜಕೀಯ ಲಾಭಕ್ಕಾಗಿ ಹೇಳಿಕೆಯನ್ನು ಸಮರ್ಥಸಿಕೊಂಡು ಬರುತ್ತಿದ್ದಾರೆ.

ಚುನಾವಣೆ ಪ್ರಚಾರದ ಸಂದರ್ಭದಲ್ಲಂತೂ ಮಾತು, ಟೀಕೆಗಳು ಎಲ್ಲ ಬಗೆಯ ಶಿಷ್ಟಾಚಾರಗಳನ್ನು ಗಾಳಿಗೆ ತೂರುತ್ತವೆ. ವ್ಯಕ್ತಿಗತ ಕೀಳುಮಟ್ಟದ ಹೇಳಿಕೆ, ದ್ವೇಷಪೂರಿತ ಭಾಷಣ, ಅಶ್ಲೀಲ ಪದಗಳ ಪ್ರಯೋಗ, ಇದನ್ನೆಲ್ಲ ಕಂಡಾಗ ರಾಜನೀತಿ ದಿಶಾಹೀನವಾಗಿದೆ ಎಂಬುದು ಸ್ಪಷ್ಟ. ಮಾತಿಗೆ ತನ್ನದೇ ಆದ ಘನತೆ ಇದೆ, ಜನರನ್ನು ತಲುಪುವ ಶಕ್ತಿಯಿದೆ. ಹೀಗಾಗಿ, ಯಾರೇ ಆಗಲಿ ಮಾತನಾಡುವ ಮುನ್ನ ಅದರ ಪರಿಣಾಮದ ಬಗ್ಗೆ ಕೂಡ ಯೋಚಿಸಬೇಕು. ಅದರಲ್ಲೂ, ಸಾರ್ವಜನಿಕ ರಂಗದಲ್ಲಿ ಇರುವವರು, ಆಯಕಟ್ಟಿನ ಸ್ಥಳಗಳಲ್ಲಿ ಕೂತವರು ಜವಾಬ್ದಾರಿಯುತವಾಗಿ ಮಾತನಾಡಬೇಕಾಗುತ್ತದೆ. ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ವೈಯಕ್ತಿಕ ಮತ್ತು ಅವರು ಪ್ರತಿನಿಧಿಸುವ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ. ರಾಜಕೀಯ ನಾಯಕರು ಹೆಚ್ಚು ಸಂಯಮ, ತಾಳ್ಮೆಯಿಂದ ವರ್ತಿಸಲಿ. ಅವರ ಮಾತುಗಳು, ಹೇಳಿಕೆಗಳು ವಿವೇಕದಿಂದ ಕೂಡಿರಲಿ. ನಿತೀಶ್​ಕುಮಾರ್ ಪ್ರಕರಣ ಒಂದು ಪಾಠವಾಗಿ, ಮುಂದಿನ ದಿನಗಳಲ್ಲಾದರೂ ರಾಜಕಾರಣಿಗಳು, ನಾಯಕರು ಜನರ ಮನಸ್ಸನ್ನು ಬೆಸೆಯುವಂಥ ಹೇಳಿಕೆಗಳನ್ನು ನೀಡುವಂತಾಗಲಿ ಎಂಬುದು ಎಲ್ಲರ ಆಶಯ.