ಕರೊನಾ ಸೋಂಕಿನ ಹಾವಳಿಯಿಂದ ಕಳೆದ ವರ್ಷ ಶೈಕ್ಷಣಿಕ ಪರೀಕ್ಷೆಗಳೆಲ್ಲ ಅಸ್ಯವ್ಯಸ್ತವಾದವು. ಈ ವರ್ಷವಂತೂ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನೇ ನೆಚ್ಚಿಕೊಳ್ಳುವಂತಾಯಿತು. ಆನ್ಲೈನ್ ತರಗತಿಗಳ ಅಡ್ಡಪರಿಣಾಮಗಳು ಸ್ಪಷ್ಟವಾಗಿ ಗೋಚರವಾದವು. ಆದರೂ, ಬೇರೆ ಆಯ್ಕೆಯೇ ಇಲ್ಲದ್ದರಿಂದ ಮುಂದುವರಿಸಬೇಕಾಯಿತು. ಸರಿಯಾಗಿ ತರಗತಿಗಳು ನಡೆಯದ ಕಾರಣ ಪಠ್ಯವನ್ನು ಗ್ರಹಿಸಲು ಆಗದೆ, ಅಭ್ಯಾಸದ ಕಡೆಗೆ ಗಮನ ಕೊಡಲಾಗದೆ ವಿದ್ಯಾರ್ಥಿಗಳು ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಅದೆಷ್ಟೋ ಜನ ಖಿನ್ನತೆಗೆ ಜಾರಿದ್ದಾರೆ. ಈಗ ಪರೀಕ್ಷಾ ಸಮಯ ಬೇರೆ. ಇಂಥದ್ದರಲ್ಲಿ ದೇಶದಾದ್ಯಂತ ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿದೆ. ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಈ ನಡುವೆ ಸಿಬಿಎಸ್ಇ ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಹಲವು ರಾಜ್ಯಗಳು ಕೇಂದ್ರವನ್ನು ಆಗ್ರಹಿಸಿದವು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೇ 4ರಿಂದ ಜೂನ್ 14ರವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳನ್ನೇ ರದ್ದುಗೊಳಿಸಲಾಗಿದ್ದರೆ, 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜೂನ್ನಲ್ಲಿ ಪರಿಸ್ಥಿತಿ ಅವಲೋಕಿಸಿ, ಪರೀಕ್ಷೆ ದಿನಾಂಕ ಪ್ರಕಟಿಸಲು ತೀರ್ವನಿಸಲಾಗಿದೆ.
ಈ ಬಾರಿ ಸಿಬಿಎಸ್ಇ 10ನೇ ತರಗತಿಯಲ್ಲಿ 21.50 ಲಕ್ಷ ಮತ್ತು 12ನೇ ತರಗತಿಯಲ್ಲಿ 14.30 ಲಕ್ಷ ಸೇರಿ ಒಟ್ಟು 36 ಲಕ್ಷ ವಿದ್ಯಾರ್ಥಿಗಳಿದ್ದಾರೆ. 10, 12ನೇ ತರಗತಿ ಪರೀಕ್ಷೆಗಳು ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟ. ಆದರೆ, ಈ ಬಾರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಕರೊನಾ ತೀವ್ರತೆ ನಡುವೆ ಪರೀಕ್ಷೆ ನಡೆಸಿ, ಏನಾದರೂ ಅಪಾಯವಾದರೆ ಎಂಬ ಆತಂಕ ಒಂದು ಕಡೆ, ಮಕ್ಕಳ ಶೈಕ್ಷಣಿಕ ಹಿತವನ್ನು ರಕ್ಷಿಸುವ ಒತ್ತಡ ಇನ್ನೊಂದೆಡೆ. ಹಾಗಾಗಿ, ಸರ್ಕಾರ ಮೊದಲು ಜೀವರಕ್ಷಣೆಗೆ ಆದ್ಯತೆ ನೀಡಿದೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನವನ್ನು ಆಧರಿಸಿ, ಫಲಿತಾಂಶವನ್ನು ಸಿಬಿಎಸ್ಇ ನೀಡಲಿದೆ. ಒಂದು ವೇಳೆ, ಮಂಡಳಿ ನೀಡಿದ ಫಲಿತಾಂಶ ತೃಪ್ತಿಕರವಾಗಿಲ್ಲ ಎಂದೆನಿಸಿದರೆ, ಪರೀಕ್ಷೆ ಬರೆಯಬಹುದು. ಅಂಥ ವಿದ್ಯಾರ್ಥಿಗಳಿಗೆ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಪರೀಕ್ಷೆ ನಡೆಸಲಾಗುತ್ತದೆ. ಅದೇನಿದ್ದರೂ, ಹತ್ತನೇ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಿರ್ಧಾರ ಬೇವು-ಬೆಲ್ಲದಂತಾಗಿದೆ. ಫಲಿತಾಂಶ, ಹನ್ನೊಂದನೇ ತರಗತಿಯ ಪ್ರವೇಶಾತಿ, ವಿಷಯ ಆಯ್ಕೆ ಬಗ್ಗೆ ಹಲವು ಪ್ರಶ್ನೆ, ಗೊಂದಲಗಳಿದ್ದು, ಸರ್ಕಾರ ಅವುಗಳನ್ನು ಅದಷ್ಟು ಬೇಗ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಈಗಾಗಲೇ ಹೈರಾಣಾಗಿರುವ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಜೂನ್ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಬೇಕಿವೆ. ಕಾದು ನೋಡಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ. ಅದೇನಿದ್ದರೂ, ವಿದ್ಯಾರ್ಥಿಗಳ ಹಿತವನ್ನು ಗಮನಿಸಿ, ಸೂಕ್ತ ವಿವೇಚನೆಯೊಂದಿಗೆ ಸಮರ್ಪಕ ನಿರ್ಧಾರಕ್ಕೆ ಬರುವುದು ಅಗತ್ಯ.