ಕರ್ನಾಟಕ ಸೇರಿ ರಾಷ್ಟ್ರಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶ ದಿಗ್ಬಂಧನ(ಲಾಕ್ಡೌನ್)ದಲ್ಲಿದ್ದು, ಜನರಿಗೆ ತುರ್ತು ಸೇವೆಗಳನ್ನು ಒದಗಿಸುವ ವಲಯಗಳು ಅಕ್ಷರಶಃ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ವೈದ್ಯಕೀಯ ರಂಗ (ವೈದ್ಯರು, ನರ್ಸ್, ಔಷಧ ಅಂಗಡಿಯವರು, ಆರೋಗ್ಯ ಇಲಾಖೆ ಸಿಬ್ಬಂದಿ), ಪೊಲೀಸ್ ಇಲಾಖೆ, ಸ್ವಚ್ಛತಾ ಸಿಬ್ಬಂದಿ, ಹಾಲು, ತರಕಾರಿ, ದಿನಸಿ ಪೂರೈಕೆದಾರರು ಮತ್ತು ಮಾಧ್ಯಮದವರು ಜೀವದ ಹಂಗು ತೊರೆದು ಜನರಿಗೆ ಸವಲತ್ತು ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಈ ಅತ್ಯಾವಶ್ಯಕ ಸೇವೆಗಳ ಪೂರೈಕೆಯಲ್ಲಿ ಒಂದಿಷ್ಟು ಅವ್ಯವಸ್ಥೆಯಾದರೂ, ಜನಸಾಮಾನ್ಯರು ಪರದಾಡುವಂತಾಗುತ್ತದೆ. ಕರ್ನಾಟಕ ಸೇರಿ ರಾಷ್ಟ್ರದ ಜನಸಂಖ್ಯೆಯ ಬಹುದೊಡ್ಡ ಭಾಗ ಮನೆಗಳಲ್ಲಿ ಬಂದಿಯಾಗಿರುವಾಗ ಕೆಲವು ಇಲಾಖೆಗಳು ಶಕ್ತಿಮೀರಿ ದುಡಿಯುತ್ತಿವೆ. ಅದಕ್ಕೆ ಇವರನ್ನು ‘ಕರೊನಾ ಯೋಧರು’ ಎಂದೂ ಶ್ಲಾಘಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮಗಳ ಮೂಲಕ ಇವರ ಸೇವೆಯನ್ನು ಪ್ರಶಂಸಿಸಿದ್ದಾರೆ.
ಕರೊನಾ ಸೋಂಕಿನ ರೂಪದಲ್ಲಿ ಬಂದೆರಗಿರುವ ದೊಡ್ಡ ಆಪತ್ತಿನ ವಿರುದ್ಧ ಇವರೆಲ್ಲ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದಾರೆ ಎಂಬುದೇನೋ ನಿಜ; ಆದರೆ ಇವರ ಕೈಗಳಿಗೆ ಶಸ್ತ್ರಾಸ್ತ್ರಗಳನ್ನೇ ನೀಡದೆ ಅಂದರೆ ಅಗತ್ಯ ಸವಲತ್ತುಗಳನ್ನು ಒದಗಿಸದೆ ಇದ್ದರೆ ಪರಿಸ್ಥಿತಿ ಎಲ್ಲಿಗೆ ತಲುಪಬಹುದು ಎಂಬುದು ಅಂದಾಜಿಸುವುದು ಕಷ್ಟ. ವೈದ್ಯಕೀಯ ಉಪಕರಣಗಳು ಮತ್ತು ವೈದ್ಯರಿಗೆ ರಕ್ಷಾಕವಚಗಳ ಕೊರತೆ ತೀವ್ರ ಪ್ರಮಾಣದಲ್ಲಿ ಕಂಡುಬರುತ್ತಿದೆ. ಅಪಾಯದೊಂದಿಗೆ ಆಟವಾಡುತ್ತಲೇ ವೈದ್ಯರು ಚಿಕಿತ್ಸೆ ನೀಡಬೇಕಾ? ಅವರಿಗೆ ಸೂಕ್ತ ಸೌಕರ್ಯ ಒದಗಿಸಿದರೆ ವೈದ್ಯರ ಮತ್ತು ಸಂಬಂಧಿತ ಸಿಬ್ಬಂದಿಯ ಮನೋಬಲ ಕೂಡ ಹೆಚ್ಚುವುದಲ್ಲವೆ? ಪೊಲೀಸರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಿಲ್ಲ. ಜನರು ರಸ್ತೆಗೆ ಇಳಿಯದಂತೆ, ಅನವಶ್ಯಕವಾಗಿ ಓಡಾಡದಂತೆ ಎಲ್ಲ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಇವರು ವಾಹನ ಸವಾರರನ್ನು ತಡೆದು ‘ಎಲ್ಲಿ, ಏಕೆ ಹೋಗುತ್ತಿದ್ದೀರಿ?’ ಎಂದು ವಿಚಾರಿಸುವುದು ಸಾಮಾನ್ಯ. ಆದರೆ, ಹೀಗೆ ಕಾರ್ಯನಿರ್ವಹಿಸುವಾಗ ಪೊಲೀಸರು ಸೋಂಕಿತರ ಸಂಪರ್ಕಕ್ಕೆ ಬಂದರೆ? ಅಥವಾ ಶಂಕಿತ ಸೋಂಕಿತರು ಎಂದು ಕಂಡುಹಿಡಿಯುವುದು ಹೇಗೆ? ಜನರನ್ನು ರಕ್ಷಿಸುವ ಪೊಲೀಸರ ಸುರಕ್ಷೆಗೆ ಮುಖಗವಸು, ಕೈಗವಸುಗಳನ್ನು ಒದಗಿಸಲಾಗಿಲ್ಲ. ಜನರಿಗೆ ನಿಖರ ಮಾಹಿತಿ, ಸುದ್ದಿ ಒದಗಿಸುವ ಮಾಧ್ಯಮದವರ ಬಗೆಗೂ ಕಾಳಜಿ ವಹಿಸಲಾಗಿಲ್ಲ. ಅಗತ್ಯ ವಸ್ತುಗಳ ಸರಬರಾಜು ಇತ್ಯಾದಿ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ಸರ್ಕಾರ ಅದೇ ತುರ್ತು ಸೇವೆ ಒದಗಿಸುತ್ತಿರುವವರಿಗೆ ಅಗತ್ಯ ಸೌಕರ್ಯಗಳನ್ನು ನೀಡಲು ಮೀನಮೇಷ ಎಣಿಸುತ್ತಿರುವುದೇಕೆ?
ಇಡೀ ರಾಷ್ಟ್ರ ವೈದ್ಯರ, ಆರೋಗ್ಯ ಸಿಬ್ಬಂದಿಯ ಸಮರ್ಪಣಾ ಭಾವದ ಕೆಲಸವನ್ನು ಗಮನಿಸುತ್ತಿದೆ. ವಾರ್ಡ್ಬಾಯ್ಗಳಿಂದ ಹಿಡಿದು ಆಂಬುಲೆನ್ಸ್ ಚಾಲಕನವರೆಗೂ ಜನರ ಪ್ರಾಣರಕ್ಷಣೆಗೆ ಹೋರಾಡುತ್ತಿದ್ದಾರೆ. ಬಹುತೇಕರು ಮನೆಯಲ್ಲಿದ್ದು ಸುರಕ್ಷಾ ಭಾವ ಅನುಭವಿಸುತ್ತಿದ್ದರೆ ಕೆಲವರು ಕರ್ತವ್ಯನಿರ್ವಹಣೆಯಲ್ಲಿ ಉಳಿದ ಸಂಗತಿಗಳನ್ನು ಗೌಣವಾಗಿಸಿಕೊಂಡಿದ್ದಾರೆ. ಇಟಲಿ, ಸ್ಪೇನ್ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ಕೆಲ ವೈದ್ಯರೇ ಕರೊನಾ ಮಹಾಮಾರಿಗೆ ಬಲಿಯಾದ ವರದಿಗಳನ್ನು ನೋಡಿದ್ದೇವೆ. ನಮ್ಮ ರಾಜ್ಯ, ದೇಶದಲ್ಲೂ ಇಂಥ ಅಪಸವ್ಯಗಳು ನಡೆಯಬಾರದು. ಆ ಮುಂಚೆಯೇ ಸರ್ಕಾರ ಮತ್ತು ಅದರ ಸಂಬಂಧಿತ ಇಲಾಖೆಗಳು ಎಚ್ಚೆತ್ತೆಕೊಂಡು, ಅಗತ್ಯ ಸೇವೆ ಕಲ್ಪಿಸುತ್ತಿರುವವರಿಗೆ ಮೂಲಸೌಕರ್ಯಗಳನ್ನು ತಡಮಾಡದೆ ಕಲ್ಪಿಸಲಿ.