ಅಭಿವೃದ್ಧಿಯ ಹೊಸ ಮತ್ತು ಪರಿಣಾಮಕಾರಿ ಆಯಾಮಕ್ಕೆ ತೆರೆದುಕೊಳ್ಳುತ್ತ ಹೋಗಬೇಕಾದರೆ ಒಂದಿಷ್ಟು ಸುಧಾರಣೆಗಳು, ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಬಂಡವಾಳ ಆಕರ್ಷಿಸುವಲ್ಲಿ ಎಲ್ಲ ರಾಜ್ಯಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎಂಬುದು ನಿಜ. ಆದರೆ, ಉದ್ಯಮಿಗಳಿಗೆ ಭೂಮಿ ಒದಗಿಸುವುದು, ತಕ್ಕ ಸವಲತ್ತುಗಳನ್ನು ಪೂರೈಸುವುದು ನಿಜಕ್ಕೂ ಸವಾಲು. ಯಾವ ರಾಜ್ಯಗಳು ಹೆಚ್ಚು ಅನುಕೂಲಗಳನ್ನು ಕಲ್ಪಿಸಿ ಕೊಡುತ್ತವೆಯೋ, ಅಲ್ಲಿ ಉದ್ಯಮಗಳ ಒಲವು ವ್ಯಕ್ತವಾಗುವುದು ಸಹಜ. ಅಪಾರ ಸಂಪನ್ಮೂಲ, ಮಾನವ ಕೌಶಲ, ತಂತ್ರಜ್ಞಾನದ ಬಲ ಹೊಂದಿರುವ ಕರ್ನಾಟಕ ಕೂಡ ಉದ್ಯಮಸ್ನೇಹಿ ವಾತಾವರಣವನ್ನು ಹೊಂದಿದೆ. ಕೃಷಿ ಮತ್ತು ಉದ್ಯಮ ಎರಡೂ ರಂಗಗಳನ್ನು ಸಮತೋಲನ ಮಾಡುತ್ತಲೇ ರಾಜ್ಯ ಸರ್ಕಾರ ‘ಭೂಸುಧಾರಣೆಗಳ (ತಿದ್ದುಪಡಿ) ವಿಧೇಯಕ-2020’ ಜಾರಿಗೆ ಮುಂದಾಗಿದೆ. ಇದಕ್ಕೆ ವಿಧಾನ ಪರಿಷತ್ ಅಂಗೀಕಾರವೂ ದೊರೆತಿದೆ.
ಉದ್ಯಮಕ್ಕೆ ಭೂಮಿ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಕೃಷಿ ಹಿನ್ನೆಲೆ ಇಲ್ಲದವರೂ ಕೃಷಿ ಭೂಮಿ ಖರೀದಿಸುವುದು, ಬಂಡವಾಳ ಹೂಡಿಕೆ, ಉದ್ಯಮ ಸ್ಥಾಪನೆಗೆ ಉತ್ತೇಜನ ಹಾಗೂ ಉದ್ಯೋಗಸೃಷ್ಟಿಗೆ ಅವಕಾಶ ಕಲ್ಪಿಸುವುದು ಹೊಸ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಆದರೆ, ಕಾಯ್ದೆಯ ಬಗ್ಗೆ ಕೆಲವರಲ್ಲಿ ಸಣ್ಣ ಆತಂಕವೂ ಇದೆ. ಹಾಗಾಗಿ, ಸರ್ಕಾರ ಕಳವಳ, ಆತಂಕಗಳನ್ನು ದೂರ ಮಾಡಿ, ಭೂ ಸುಧಾರಣೆ ಕಾಯ್ದೆಯು ಅಭಿವೃದ್ಧಿಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು. ಉದ್ಯಮವಲಯ ಈ ಬೆಳವಣಿಗೆಯನ್ನು ಆಶಾಭಾವದಿಂದ ಕಾಣುತ್ತಿದೆ. ಭೂಮಿಯ ಲಭ್ಯತೆಯ ಸಮಸ್ಯೆಯೇ ಹೊಸ ಸಾಹಸಗಳಿಂದ ಹಿಂದಡಿ ಇಡಲು ಪ್ರಮುಖ ಕಾರಣವಾಗಿತ್ತು. ಅಲ್ಲದೆ, ಹತ್ತುಹಲವು ನಿಯಮಗಳು, ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಅಲೆದಾಟ, ಮಧ್ಯವರ್ತಿಗಳ ಹಾವಳಿ ಹೀಗೆ ಹಲವು ಸಮಸ್ಯೆಗಳು ಈ ವಲಯವನ್ನು ಕಾಡುತ್ತಿವೆ. ಹಾಗಾಗಿ, ಬಂಡವಾಳ ಹೂಡಿಕೆಯಲ್ಲಿಯೂ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಭೂಖರೀದಿಯ ನಿಯಮಗಳು ಸರಳಗೊಂಡರೆ ಕೊಂಚಮಟ್ಟಿಗಾದರೂ ಸಮಸ್ಯೆ ನೀಗಬಲ್ಲದು ಎಂಬ ಅಭಿಪ್ರಾಯವನ್ನು ಉದ್ಯಮರಂಗ ಈ ಮೊದಲೇ ವ್ಯಕ್ತಪಡಿಸಿತ್ತು. ಹೊಸ ಭೂ ಸುಧಾರಣೆಯ ಕಾಯ್ದೆಯ ಪರಿಣಾಮ, ಭೂಮಿ ಲಭ್ಯತೆ ಸುಲಭವಾಗಲಿದೆ ಎಂಬ ಸಮಾಧಾನ ಅವರಲ್ಲಿ ನೆಲೆಸಿದೆ.
‘ಈಗಾಗಲೇ ವಿವಿಧ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ನಾಶ ಮಾಡಲಾಗಿದೆ. ಪ್ರಸಕ್ತ ಕಾಯ್ದೆಯಿಂದ ಕೃಷಿಗೆ, ರೈತರಿಗೆ ಹಾನಿ ಆಗಲಿದೆ’ ಎಂಬುದು ವಿರೋಧಿಗಳ ಅಭಿಪ್ರಾಯ. ಆದರೆ, ‘ಕೃಷಿಗೆ ಸಮಾನ ಮಹತ್ವ ನೀಡಲಾಗಿದೆ. ಕೃಷಿಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ, ಉದ್ಯಮಗಳನ್ನು ಆಕರ್ಷಿಸಲು ಇದು ಅತ್ಯಾವಶ್ಯಕ ಕ್ರಮವಾಗಿತ್ತು’ ಎಂಬುದು ಸರ್ಕಾರದ ಸಮರ್ಥನೆ. ಕೃಷಿ ಹಿನ್ನೆಲೆ ಇಲ್ಲದವರು ಕೂಡ ಕೃಷಿ ಭೂಮಿ ಖರೀದಿಸಲು ಅವಕಾಶ ಇರುವುದರಿಂದ, ಅದರ ದುರುಪಯೋಗ ಆಗದಂತೆ ನಿಗಾ ವಹಿಸುವ ಅಗತ್ಯವಿದೆ. ಇಲ್ಲಿ ಮತ್ತೊಂದು ಸೂಕ್ಷ್ಮವನ್ನು ಗಮನಿಸಬೇಕು. ಬೇರೆ ಬೇರೆ ಕಾರಣಗಳ ಪರಿಣಾಮ ಕೃಷಿವಲಯ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ ಎಂಬುದು ಕಹಿಸತ್ಯ. ಹಾಗಾಗಿ, ಉದ್ಯಮಗಳ ಸ್ಥಾಪನೆಗೆ ಕೃಷಿಯಲ್ಲಿ ಪಾಳುಬಿದ್ದ ಜಮೀನನ್ನೋ, ಬಂಜರು ಭೂಮಿಯನ್ನೋ ಬಳಸಲು ಹೆಚ್ಚು ಆದ್ಯತೆ ನೀಡುವುದು ಸೂಕ್ತ. ಇದರಿಂದ ರೈತರ ಕೈಗೆ ಒಂದಿಷ್ಟು ಹಣ ಬಂದಂತೆ ಆಗುತ್ತದೆ, ಉದ್ಯಮವೂ ಸ್ಥಾಪನೆಯಾಗಿ ಉದ್ಯೋಗಸೃಷ್ಟಿಗೆ ಪೂರಕವಾಗುತ್ತದೆ. ಹಾಗಾಗಿ, ಒಟ್ಟಾರೆ ರಾಜ್ಯದ ಹಿತವನ್ನು ಗಮನಿಸಿ ಯಾವುದೇ ಕ್ಷೇತ್ರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.