ನ್ಯೂಸ್

ಯೋಗ ಕ್ಷೇಮ: ವಾರ್ಧಕ್ಯದ ಸುಖ-ಸಂತೋಷಕ್ಕೆ ಯೋಗದ ಸಹಯೋಗ

ವೃದ್ಧಾಪ್ಯದಲ್ಲಿ ಮನುಷ್ಯನನ್ನು ಅನೇಕ ವ್ಯಾಧಿಗಳು ಕಾಡುತ್ತವೆ. ಅವುಗಳೆಲ್ಲ ಆನುವಂಶಿಕ, ಒತ್ತಡ, ಆಹಾರ-ವಿಹಾರಗಳ ದೋಷ ಗಳಿಂದ ಬಂದಿರಬಹುದಾದರೂ, ಯೋಗ ಮಾರ್ಗದಿಂದ ಅವುಗಳ ಪರಿಹಾರ ಸಾಧ್ಯ. ಎಲ್ಲ ವ್ಯಾಧಿಗಳ ಮೂಲತಾಣ ಮನಸ್ಸು. ಮನೋ ಮಯ ಹಂತದಲ್ಲಿ ಆಗುವ ಒತ್ತಡ, ಉದ್ದೇಶ, ಗೊಂದಲ, ಖಿನ್ನತೆ ಹಾಗೂ ಅದರ ಋಣಾತ್ಮಕ ಪರಿಣಾಮಗಳು ಪ್ರಾಣದ ಹಂತದಲ್ಲಿ ಅಸಮತೋಲನ ತಂದು ಕ್ರಮೇಣ ವಿವಿಧ ರೋಗಗಳಾಗಿ ಹೊರಬೀಳುತ್ತವೆ. ಯೋಗ ವಿಧಾನದಲ್ಲಿ ರೋಗ ಮೂಲವಾದ ಮನಸ್ಸಿಗೇ ಚಿಕಿತ್ಸೆ ಮಾಡಲಾಗುತ್ತದೆ. ಗುಡ್ಡದ ಎತ್ತರಕ್ಕೆ ಎರಿದಂತೆ ಕಣಿವೆಯ ಮನೆ, ಮರಗಳೆಲ್ಲ ಕುಬ್ಜವಾಗಿ ತೋರುವಂತೆ, ಅಂತಃಶಕ್ತಿಯಲ್ಲಿನ ಅಚಲ ವಿಶ್ವಾಸದ ಎತ್ತರಕ್ಕೆ ಏರಿಸಿ, ಈ ವ್ಯಾಧಿ, ಚಿಂತೆ, ಒತ್ತಡಗಳೆಲ್ಲ ನಗಣ್ಯವಾಗುವಂತೆ ಮಾಡುವುದೆ ಈ ಯೋಗ ವಿಧಾನದ ಪರಿ.

ವಿಶ್ರಾಂತ ಜೀವನದಲ್ಲೂ ಅಥವಾ ಇಳಿವಯಸ್ಸಿನಲ್ಲಿಯೂ ವ್ಯಾಧಿಗಳಿಗೆ ಗುರಿಯಾಗದೇ ಮಾನಸಿಕ ಒತ್ತಡದ ಬಲಿಪಶು ಆಗದೆ ಆರೋಗ್ಯವನ್ನು ಕಾಪಾಡಿಕೊಂಡು ಸಂತಸದಿಂದ ದಿನ ಕಳೆಯಲು ಯೋಗ ವಿಧಾನದ ಸುಲಭ ಸೂತ್ರಗಳು ಇಲ್ಲಿವೆ.

  • ಬೆಳಗ್ಗೆ ಎದ್ದ ಕೂಡಲೇ ಎರಡು ಮೂರು ಲೋಟ ನೀರು ಕುಡಿಯಿರಿ.
  • ಮುಂಜಾನೆ ಪರಿಶುದ್ಧ ಪರಿಸರದಲ್ಲಿ ವಾಯುವಿಹಾರ ಕೈಗೊಳ್ಳಿ ಅಥವಾ ಯೋಗ ನಡಿಗೆಗೆ ಮುಂದಾಗಿ
  • ಕಾಲಕಾಲಕ್ಕೆ ಸರಿಯಾಗಿ ಪುಷ್ಟಿದಾಯಕ ಸಾತ್ವಿಕ ಆಹಾರವನ್ನು ಮಿತವಾಗಿ ಸೇವಿಸಿ.
  • ದಿನಕ್ಕೆ ಸುಮಾರು ಮೂರು ಲೀಟರ್ ಆಗುವಷ್ಟು ಶುದ್ಧ ನೀರು ಕುಡಿಯಿರಿ.
  • ಪ್ರತಿದಿನವೂ ಕನಿಷ್ಠ 30 ನಿಮಿಷಗಳ ಕರ್ಣಚೈತನ್ಯ ಮಾಲಾಕ್ರಿಯೆ, ಶ್ರೀ ಗಣೇಶ ನಮನ ನಡಿಗೆಯಂತ ಯೋಗ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿರಿ.
  • ನಿತ್ಯವೂ ದೇವರ ಧ್ಯಾನ ಪ್ರಾರ್ಥನೆಗಳನ್ನು ಮಾಡಿರಿ.
  • ವಾರಕ್ಕೊಂದು ದಿನ ಕೇವಲ ನೀರು ಅಥವಾ ರಸಾಹಾರ ಮಾತ್ರ ಸೇವಿಸಿ ಉಪವಾಸ ಮಾಡಿರಿ.
  • ಸಮಯಕ್ಕೆ ಸರಿಯಾಗಿ ಹಾಯಾಗಿ ನಿದ್ರೆ ಹೋಗುವ ಕ್ರಮ ಇರಲಿ.
  • ಸಿಟ್ಟು ಸಿಡುಕುಗಳಿಗೆ ಆಸ್ಪದ ಕೊಡದೆ ಎಲ್ಲರೊಡನೆ ಹೊಂದಿಕೊಂಡು ಪ್ರೀತಿಯಿಂದ ಬಾಳಿರಿ.
  • ಎಂತಹ ಸನ್ನಿವೇಶದಲ್ಲೂ ಆತಂಕಕ್ಕೊಳಗಾಗದೆ ಸಮಚಿತ್ತದಿಂದ ನಗುನಗುತ್ತ ಬಾಳುವುದನ್ನು ಕಲಿಯಿರಿ.

ವೃದ್ಧಾಪ್ಯದಲ್ಲಿ ತಮ್ಮ ಪಾಲಿಗೆ ಇರುವುದನ್ನೇ ಚೆನ್ನಾಗಿ ಆಸ್ವಾದಿಸಿ ಆನಂದಿಸುವುದನ್ನು ಕಲಿಯಬೇಕು. ಸಿಗಬೇಕಾಗಿರುವುದು ಸಿಗುತ್ತಿಲ್ಲ ಎಂಬ ಕೊರಗು ಬೇಡ. ನಿಜವಾಗಿ ವೃದ್ಧರು ತಮ್ಮ ಪರಿಪಕ್ವ ಅನುಭವದ ಸಿರಿಯಿಂದ ಕಿರಿಯರಿಗೆ ದಾರಿದೀಪವಾಗಬಹುದಾಗಿದೆ. ಸೇವಾತತ್ಪರತೆ, ಮಾರ್ಗದರ್ಶನ, ಸ್ವಾಧ್ಯಾಯ, ಸತ್ಸಂಗ ಇತ್ಯಾದಿ ರೂಢಿಸಿಕೊಂಡಲ್ಲಿ ವೃದ್ಧಾಪ್ಯ ಮರಳಿ ಅರಳಿ ಹೆಚ್ಚು ಶ್ರೀಮಂತವಾಗುವುದರಲ್ಲಿ ಸಂದೇಶವಿಲ್ಲ. ಈ ರೀತಿಯ ಜೀವನ ಸುಲಭವಲ್ಲದಿದ್ದರೂ ದುರ್ಲಭವೇನಲ್ಲ. ಅನೇಕ ಅಡಚಣೆಗಳು ಬರಬಹುದು. ಕಿರಿಯ ರೆದುರು ತನ್ನ ಹಿರಿತನ ಸ್ಥಾಪಿಸಹೋಗಿ ಕೊರಗನ್ನು ಕಟ್ಟಿಕೊಳ್ಳಬೇಕಾದ ಸ್ಥಿತಿಯೂ ಬರುತ್ತದೆ. ಜೀವನಕ್ಕಾಗಿ ಕಿರಿಯರನ್ನು ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ಕೀಳರಿಮೆ ಕಿತ್ತು ತಿನ್ನುತ್ತದೆ. ಉದ್ಯೋಗದ ಕಾರಣದಿಂದಾಗಿ ಮಕ್ಕಳು ದೂರವಿರಬೇಕಾದ ಸ್ಥಿತಿಯಲ್ಲಿ ಏಕಾಕಿತನ ಕಾಡುತ್ತದೆ. ಈ ಎಲ್ಲಾ ಕೊರತೆಗಳನ್ನು ನೀಗಿಸಿಕೊಳ್ಳಲು ವಿವೇಕದಿಂದ ವಿವೇಚಿಸಿ ತಮ್ಮನ್ನು ತಾವು ತಿದ್ದಿಕೊಂಡು ಹೊಂದಿ ಬಾಳಿದಲ್ಲಿ ಮಾತ್ರ ಅಂಥವರ ಪಾಲಿಗೆ ನೆಮ್ಮದಿಯ ಸುದಿನಗಳು ಬಂದಾವು ಎಂಬುದನ್ನು ಮರೆಯಬಾರದು. ಇನ್ನೊಬ್ಬರು ನಮ್ಮನ್ನು ಪ್ರೀತಿಯಿಂದ ನೋಡದಿರಲು ಕಾರಣ ನಮ್ಮ ವರ್ತನೆಯೇ ಆಗಿರುತ್ತದೆ. ನಮ್ಮ ವರ್ತನೆ ಸರಿಯಾದಲ್ಲಿ ಇನ್ನೊಬ್ಬರ ದೃಷ್ಟಿಯೂ ಪರಿವರ್ತನೆ ಆಗುತ್ತದೆ. ಇದನ್ನೇ ಧ್ವನಿಸುತ್ತ ಹಿಂದಿ ಕವಿತೆಯ ಸಾಲೊಂದು ಹೇಳುತ್ತದೆ.

ರಹಿಮನ್ ರಿಸಿ ಕೋ ಛಾಂಡಿ ಕೈಕರೋ ಗರೀಬೀ ಭೇಸ್
ಮಿಠಾ ಬೋಲೋ ನೈ ಚಲೋ ಸಬೈ ತುಮಾರಿ ದೇಸ್

- ಕೋಪವನ್ನು ಬಿಡಬೇಕೇ? ಬಡವನ ವೇಷ ತೊಡು. ಅಂದರೆ ‘ನಾನುಬಡವ’ ಎಂದುಕೊಂಡಾಗ ಅವಮಾನವೇ ಆಗದು; ಅವಮಾನ ಆಗದಿದ್ದ ಮೇಲೆ ಕೋಪವೂ ಬರದು. ಜೊತೆಗೆ ಸವಿ ಮಾತು, ಸವಿ ನಡೆಯಿಂದ ಎಲ್ಲರೂ ನಿನ್ನವರಾಗುತ್ತಾರೆ. ಕಾಯಿ ಹುಳಿಯಾಗಿರಬಹುದು; ಆದರೆ ಮಾಗಿದ ಹಣ್ಣು ಸವಿಯೇ ಆಗಿರುತ್ತದಲ್ಲವೇ? ಹಾಗೆಯೇ ವೃದ್ಧಾಪ್ಯದಲ್ಲೂ ಎಲ್ಲರ ಪ್ರೀತಿಗೆ ಪಾತ್ರನಾಗಲು ಮಾಗಿದ ಸವಿ ನಡತೆ ಮಾನವನದಾಗಬೇಕು.

ವೃದ್ಧಾಪ್ಯ ಮರಳಿ ಅರಳಲು ಅಜ್ಜ/ ಅಜ್ಜಿ ಮೊಮ್ಮಗುವಿನಂತೆ ಆಗಬೇಕು. ರಾಗದ್ವೇಷಾದಿಗಳ ಲವಲೇಶವೂ ಸ್ಪರ್ಶಿಸದ ಮುಗ್ಧ ನಿಷ್ಕಲ್ಮಷ ಮಗುವಿನ ನಗು, ಮುದಿಮೊಗದಲ್ಲಿಯೂ ಮೂಡಿದರೆ ಮರಳಿ ಅರಳಿದ್ದಕ್ಕೆ ಅದೇ ಜೀವಂತ ಪುರಾವೆ.