ನ್ಯಾಯ ಕೋರಿ ಕೋರ್ಟ್ ಮೆಟ್ಟಿಲೇರುವವರಿಗೆ ತ್ವರಿತವಾಗಿ ನ್ಯಾಯ ದೊರೆಯಬೇಕು ಎಂಬುದು ನ್ಯಾಯಸೂತ್ರದ ಮೂಲಭೂತ ಲಕ್ಷಣಗಳಲ್ಲಿ ಒಂದು. ನ್ಯಾಯದಾನದಲ್ಲಿ ವಿಳಂಬವಾದರೆ ಅದು ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತು ಇರುವುದು ಈ ಕಾರಣಕ್ಕಾಗಿಯೇ. ಆದರೆ ಬೇರೆ ಬೇರೆ ಕಾರಣಗಳಿಗಾಗಿ ದೇಶದಲ್ಲಿ ಕೋಟ್ಯಂತರ ಕೇಸುಗಳು ವಿಲೇವಾರಿಗಾಗಿ ಕಾಯುತ್ತಿವೆ. ಇದರಿಂದ ನ್ಯಾಯಾಂಗದ ಮೇಲಿನ ಹೊರೆ ದಿನದಿನಕ್ಕೂ ಹೆಚ್ಚುತ್ತಿದೆಯಲ್ಲದೆ, ಕಕ್ಷಿದಾರರಿಗೂ ಸಮಸ್ಯೆಯಾಗುತ್ತಿದೆ.
ಪ್ರಕರಣಗಳ ಶೀಘ್ರ ವಿಲೇವಾರಿಗೆ ಕೋರ್ಟುಗಳು ಶ್ರಮಹಾಕುತ್ತಿವೆಯಾದರೂ, ಪ್ರಕರಣಗಳ ಗಾತ್ರ ಬಹಳ ದೊಡ್ಡದಿದೆ. ಕೆಳಹಂತದಿಂದ ಮೇಲಿನ ಹಂತದವರೆಗಿನ ನ್ಯಾಯಾಲಯಗಳ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸುವಲ್ಲಿ ಲೋಕ ಅದಾಲತ್ಗಳು ನೆರವಾಗಬಲ್ಲವು. ರಾಜ್ಯದಲ್ಲಿ ಮೊನ್ನೆ ಶನಿವಾರ ನಡೆದ ಬೃಹತ್ ಲೋಕ ಅದಾಲತ್ನಲ್ಲಿ ಸುಮಾರು 64 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಈ ಮಾತಿಗೆ ಒಂದು ನಿದರ್ಶನ. ಉಚ್ಚ ನ್ಯಾಯಾಲಯ ಹಾಗೂ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಈ ಅದಾಲತ್ ನಡೆಯಿತು. ಕಂದಾಯ ಇಲಾಖೆ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಚೆಕ್ ಬೌನ್ಸ್ ಕೇಸುಗಳು- ಹೀಗೆ ವಿವಿಧ ಬಾಬತ್ತುಗಳ ಕೇಸುಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಿಳಿಸಿದ್ದಾರೆ.
ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಅನೇಕ ದಂಪತಿಗಳು ಮತ್ತೆ ಒಂದಾಗಲು ನಿರ್ಧರಿಸಿದ್ದು ಲೋಕ ಅದಾಲತ್ ಪ್ರಕ್ರಿಯೆಯ ಮಾನವೀಯ ಮುಖದ ಪ್ರತಿಬಿಂಬ ಎಂದು ಹೇಳಬಹುದು. ಈ ಮೂಲಕ ಮನಸುಗಳನ್ನು ಒಂದಾಗಿಸಿದ ಶ್ರೇಯಸ್ಸೂ ಇದಕ್ಕೆ ದಕ್ಕುತ್ತದೆ. ಲೋಕ ಅದಾಲತ್ನಲ್ಲಿ ವಿಲೇವಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ. ಸಾಮಾನ್ಯವಾಗಿ ಕೆಳಹಂತದ ಕೋರ್ಟುಗಳ ಆದೇಶ ಅಥವಾ ತೀರ್ಪು ಪ್ರಶ್ನಿಸಿ ಮೇಲಿನ ಕೋರ್ಟಿಗೆ ಹೋಗಲು ಅವಕಾಶ ಇರುತ್ತದೆ. ಹೀಗಾಗಿ ನ್ಯಾಯದಾನ ಪ್ರಕ್ರಿಯೆ ವಿಪರೀತ ಸಮಯವನ್ನು ಬೇಡುತ್ತದೆ. ಆದರೆ ಲೋಕ ಅದಾಲತ್ನಲ್ಲಿ ಅಪೀಲು ಅವಕಾಶ ಇಲ್ಲ. ಪ್ರತಿ ಪ್ರಕರಣದ ಎರಡೂ ಪಕ್ಷಗಾರರ ಸಮ್ಮತಿಯ ಮೇಲೆಯೇ ಇಲ್ಲಿ ಪ್ರಕರಣವನ್ನು ಇತ್ಯರ್ಥಕ್ಕೆ ಪಟ್ಟಿಮಾಡಲಾಗಿರುತ್ತದೆ.
ಇದಲ್ಲದೆ, ಕಾನೂನು ಸೇವೆಗಳ ಪ್ರಾಧಿಕಾರ ಇನ್ನೂ ಒಂದು ವಿಶೇಷ ಕಾರ್ಯಗೈದಿದೆ. ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಸುಮಾರು ಎರಡು ಕೋಟಿಯಷ್ಟಿದ್ದು, ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ದಂಡ ಪ್ರಮಾಣದಲ್ಲಿ ಶೇ.50 ರಿಯಾಯಿತಿ ನೀಡಬಹುದೆಂಬ ಸಲಹೆಯನ್ನು ನ್ಯಾ.ವೀರಪ್ಪ ಅವರು ಮಂಡಿಸಿದ್ದರು. ಇದಕ್ಕೆ ಸರ್ಕಾರ ಒಪ್ಪಿ, ಫೆ.11ರವರೆಗೆ ಇದಕ್ಕೆ ಅವಕಾಶ ಕೊಡಲಾಗಿತ್ತು. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿ 150 ಕೋಟಿ ರೂ. ಸಂಗ್ರಹವಾಗಿದ್ದು, ಇನ್ನೂ ಎರಡು ವಾರ ಕಾಲ ರಿಯಾಯಿತಿ ವಿಸ್ತರಣೆ ಸಾಧ್ಯತೆಯಿದೆ. ಒಟ್ಟಿನಲ್ಲಿ, ಕೋರ್ಟುಗಳಲ್ಲಿ ಇರುವ ಪ್ರಕರಣಗಳು ಬೇಗ ಬಗೆಹರಿದರೆ, ನ್ಯಾಯಾಂಗದ ಒತ್ತಡ ತಗ್ಗುವುದಲ್ಲದೆ, ಕಕ್ಷಿದಾರರಿಗೂ ನಿರಾಳವಾಗುತ್ತದೆ.