ನ್ಯೂಸ್

ಮದ್ವೆಯಾದ 23 ದಿನದಲ್ಲೇ ವಿಜಯಪುರದ ನವದಂಪತಿ ಸಾವು: ಬರ್ತಡೇ ಆಚರಣೆ ಬೆನ್ನಲ್ಲೇ ನಡೆಯಿತು ಘೋರ ದುರಂತ

ವಿಜಯಪುರ: ಬೈಕ್​ ಮತ್ತು ಕ್ಯಾಂಟರ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನವದಂಪತಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ನಗರ ಹೊರವಲಯದ ಸೋಲಾಪುರ ಬೈಪಾಸ್ ಬಳಿ ನಿನ್ನೆ (ಜೂ.13) ರಾತ್ರಿ ನಡೆದಿದೆ.

ಮೃತರನ್ನು ಹೊನಮಲ್ಲ ತೇರದಾಳ (31) ಮತ್ತು ಅವರ ಪತ್ನಿ ಗಾಯತ್ರಿ (24) ಎಂದು ಗುರುತಿಸಲಾಗಿದೆ. ಹೊನಮಲ್ಲ ಅವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೇ 22 ರಂದು ಗಾಯತ್ರಿ ಎಂಬುವರನ್ನು ವರಿಸಿದ್ದರು. ಮದುವೆಯಾದ 23 ದಿನಗಳಲ್ಲಿ ನವಜೋಡಿ ಮೃತಪಟ್ಟಿದೆ.

ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ನವಜೋಡಿಯ ಸಾವಿಗೆ ಕಂಬನಿ ಮಿಡಿದ್ದಾರೆ. ಅಪಘಾತದ ಸ್ಥಳಕ್ಕೆ ವಿಜಯಪುರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)