ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರ ಕಳೆದ ಶುಕ್ರವಾರ (ಡಿ.09)ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಭಾರತದಲ್ಲಿ 1000 ಸ್ಕ್ರೀನ್ಸ್, ಹೊರದೇಶಗಳಲ್ಲಿ 300 ಸ್ಕ್ರೀನ್ಸ್ ಸೇರಿದಂತೆ ವಿಶ್ವಾದ್ಯಂತ 1300ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲು ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ವಿದೇಶಗಳಲ್ಲೂ ಅನಿವಾಸಿ ಭಾರತೀಯರು, ಡಾ. ವಿಜಯ ಸಂಕೇಶ್ವರರ ಸಾಹಸಗಾಥೆಯನ್ನು ನೋಡಿ ಮನಸೋತಿದ್ದಾರೆ.
ಚಿತ್ರದ ಕಥೆ, ಅದ್ಧೂರಿ ಮೇಕಿಂಗ್, ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ.. ಹೀಗೆ ಪ್ರತಿ ವಿಷಯದಲ್ಲೂ ‘ವಿಜಯಾನಂದ’ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. 1976ರಲ್ಲಿ ಕೇವಲ ಒಂದು ಲಾರಿಯೊಂದಿಗೆ ಆರಂಭವಾಗುವ ಡಾ. ವಿಜಯ ಸಂಕೇಶ್ವರ ಅವರ ಜರ್ನಿ ಇವತ್ತು 5,500 ಲಾರಿಗಳೊಂದಿಗೆ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಬೆಳೆದಿದೆ. ಅತ್ಯಂತ ಸವಾಲಿನ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಅವರು ಬೆಳೆದಿದ್ದು ಹೇಗೆ? ಎದುರಿಸಿದ ಸವಾಲುಗಳೇನು? ಅಡೆತಡೆಗಳನ್ನು ಹೇಗೆ ಮೆಟ್ಟಿ ನಿಂತರು? ಎಂಬುದನ್ನು ವಿವರವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಈ ನೈಜ ಕಥೆಗೆ ಪ್ರೇಕ್ಷಕರು ಮನಸೋತಿದ್ದು, ದಿಗ್ಗಜ ಕಲಾವಿದರ ಅಭಿನಯಕ್ಕೆ ಬಹುಪರಾಕ್ ಎನ್ನುತ್ತಿದ್ದಾರೆ. ಅದರಲ್ಲಂತೂ ಪ್ರಕಾಶ್ ಬೆಳವಾಡಿ ಪಾತ್ರ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ.
ಪ್ರಕಾಶ್ ಬೆಳವಾಡಿ, ಹಿಂದಿ, ತಮಿಳು ಸೇರಿದಂತೆ ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಹಿಂದೆಯೂ ‘ಮದ್ರಾಸ್ ಕೆಫೆ’, ‘ಏರ್ಲಿಫ್ಟ್’, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತ ‘ದಿ ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಜೀವನಾಧಾರಿತ ‘ಠಾಕ್ರೆ’, ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ‘ಸೂರರೈ ಪೊಟ್ರು’ ಸೇರಿದಂತೆ ಈ ವರ್ಷ ತೆರೆಕಂಡ ಕಾಶ್ಮೀರಿ ಪಂಡಿತರ ಮಾರಣಹೋಮದ ಕುರಿತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ನೈಜ ಘಟನೆಯಾಧಾರಿತ ಹಾಗೂ ಬಯೋಪಿಕ್ಗಳಿಗೆ ಹೋಲಿಸಿದರೆ, ಅವರು ‘ವಿಜಯಾನಂದ’ ಚಿತ್ರದಲ್ಲಿ ನಟಿಸಿರುವ ರಾಮ ರಾವ್ ಪಾತ್ರ ಹೆಚ್ಚು ಗಮನ ಸೆಳೆಯುತ್ತಿದೆ. ತಮ್ಮ ಮೆಥಡ್ ಆಕ್ಟಿಂಗ್ನಿಂದ ಮನೆಮಾತಾಗಿರುವ ಪ್ರಕಾಶ್ ಬೆಳವಾಡಿ ಎಂತಹ ಪಾತ್ರ ಸಿಕ್ಕರೂ ಲೀಲಾಜಾಲ. ‘ವಿಜಯಾನಂದ’ ಚಿತ್ರದಲ್ಲೂ ಸಹ ರಾಜಕಾರಣಿಗಳಿಗೆ ಸಿಂಹ ಸ್ವಪ್ನದಂತಿದ್ದ ಹಿರಿಯ ಪತ್ರಕರ್ತರೊಬ್ಬರ ಪಾತ್ರದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಡೈಲಾಗ್ಗಳು, ಅವರ ಬಾಡಿ ಲಾಂಗ್ವೇಜ್, ಮಾತನಾಡುವ ರೀತಿ, ಹಾವ ಭಾವ ಜನರ ಮನಸೂರೆಗೊಳ್ಳುತ್ತಿವೆ.
ವಿಜಯ ಸಂಕೇಶ್ವರ ಸರ್ ಒಬ್ಬ ಲೆಜೆಂಡ್. ನನಗೆ ಅವರ ಬಗ್ಗೆ ಗೊತ್ತಿತ್ತಾದರೂ, ಅವರ ಹೋರಾಟದ ಜೀವನದ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಹೀಗಾಗಿಯೇ ‘ವಿಜಯಾನಂದ’ ಸಿನಿಮಾ ನೋಡಿದೆ. ಸಾಮಾನ್ಯ ಕುಟುಂಬದಿಂದ ಬಂದು ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ವಿಜಯ ಸಂಕೇಶ್ವರ ಅವರು ಎಲ್ಲರಿಗೂ ಇನ್ಸ್ಪಿರೇಷನ್. ಅವರ ಪಾತ್ರದಲ್ಲಿ ನಾಯಕ ನಿಹಾಲ್ ಚೆನ್ನಾಗಿ ನಟಿಸಿದ್ದಾರೆ. ಅನಂತ್ ನಾಗ್ ನಟಿಸಿಲ್ಲ, ಪಾತ್ರವನ್ನು ಜೀವಿಸಿದ್ದಾರೆ. ಪ್ರಕಾಶ್ ಬೆಳವಾಡಿ ಅವರ ನಟನೆಯೂ ಅದ್ಭುತವಾಗಿದೆ. ಅವರ ಸಾಧನೆ ಹಿಂದಿನ ಕಥೆ, ಅವರ ಜರ್ನಿಯನ್ನು ನಿರ್ದೇಶಕಿ ರಿಷಿಕಾ ಶರ್ಮಾ ನೀಟಾಗಿ ತೋರಿಸಿದ್ದಾರೆ. ಮುಂಬೈನಿಂದ ಪ್ರಿಂಟಿಂಗ್ ಮೆಷಿನ್ ತರುವುದು, ಲಾರಿ ಟ್ರಾನ್ಸ್ಪೋರ್ಟ್ ಬಿಜಿನೆಸ್ ಆರಂಭಿಸುವುದು, ನಂತರ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಡುವುದು... ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದ ಕ್ಷೇತ್ರಗಳಲ್ಲಿ ಉದ್ಯಮ ಸ್ಥಾಪಿಸಿ ಸಕ್ಸಸ್ ಆಗಿದ್ದಾರೆ. ಮೇಕಿಂಗ್, ಹಿನ್ನೆಲೆ ಸಂಗೀತ, ಒಂದಕ್ಕೊಂದು ಪೂರಕವಾಗಿದೆ. ಇದೊಂದು ಸ್ಪೂರ್ತಿದಾಯಕ ಸಿನಿಮಾ. ನನಗೆ ಒಂದೊಳ್ಳೆ ಚಿತ್ರ ನೋಡಿದ ಸಮಾಧಾನವಿದೆ. ಕುಟುಂಬ ಸಮೇತ ಎಲ್ಲರೂ ಕುಳಿತು ನೋಡುವ ಚಿತ್ರ. ವಿಜಯ ಸಂಕೇಶ್ವರ ಸರ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಮಾನವೀಯ ಮೌಲ್ಯಗಳ ಬಲವಾದ ಕಥೆ. ಈ ರೀತಿಯ ಚಿತ್ರಗಳು ಓಡಬೇಕು. | ರಂಜನ್ ನಟ ‘ವಿಜಯಾನಂದ’ ನಿಜಕ್ಕೂ ಒಂದು ಸ್ಪೂರ್ತಿದಾಯಕ ಸಿನಿಮಾ. ಕಷ್ಟ ಪಟ್ಟರೆ ಮುಂದೆ ಬರಬಹುದು ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ. ಪ್ರಕಾಶ್ ಬೆಳವಾಡಿ ಅವರ ನಟನೆ ತುಂಬ ಚೆನ್ನಾಗಿದೆ. | ಶ್ರೀನಿವಾಸ್ ಪ್ರೇಕ್ಷಕ ಏನಾದರೂ ಸಾಧಿಸಬೇಕು ಅಂತಿರುವವರು ನೋಡಲೇಬೇಕಾದ ಚಿತ್ರವಿದು. ಕಷ್ಟಪಟ್ಟರೆ ಪ್ರತಿಫಲವಿದೆ ಎಂಬ ಮಾತಿದೆ. ಅದರ ಜತೆಗೆ ಮನುಷ್ಯನಿಗೆ ಛಲ, ಹಠ ಇರಬೇಕು ಎಂಬುದನ್ನು ಈ ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ವಿಷಯ ಚೆನ್ನಾಗಿದೆ. ಈಗಿನ ಜನರೇಷನ್ಗೆ ಹೇಳಿ ಮಾಡಿಸಿದ ಚಿತ್ರವಿದು. ಅಡ್ಡದಾರಿ ಹಿಡಿಯುವ ಬದಲು ಒಳ್ಳೆಯ ದಾರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಬಹುದು ಅಂತ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಹೇಳಿದ್ದಾರೆ. | ರಾಜು ಪ್ರೇಕ್ಷಕ ‘ವಿಜಯಾ ನಂದ’ ಚಿತ್ರ ತುಂಬ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ನೋಡಿದರೆ ನಾವು ಸಾಧಿಸ ಬೇಕಿರುವುದು ತುಂಬಾ ಇದೆ ಅಂತ ಗೊತ್ತಾಗುತ್ತದೆ. ನನಗೆ ಚಿತ್ರ ಇಷ್ಟವಾಯಿತು. ಅನಂತ್ ನಾಗ್, ಪ್ರಕಾಶ್ ಬೆಳವಾಡಿ ಸೇರಿದಂತೆ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಇವತ್ತಿನ ಜನರೇಷನ್ ಮಿಸ್ ಮಾಡದೇ ಈ ಚಿತ್ರವನ್ನು ನೋಡಬೇಕು. ಸಾಧನೆ ಹಿಂದಿನ ಪರಿಶ್ರಮದ ಬಗ್ಗೆ ತಿಳಿಯುತ್ತದೆ. | ಮಣಿ ಪ್ರೇಕ್ಷಕ