ನ್ಯೂಸ್

ಕಾಲೇಜಿನ ಬಳಿ ನಿಲ್ಲಿಸದಿದ್ದಕ್ಕೆ ಬಸ್​ನಿಂದ ಹೊರ ಜಿಗಿದ್ದಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿನಿ ದುರಂತ ಸಾವು

ವಿಜಯನಗರ: ಕಾಲೇಜಿನ ಬಳಿ ಬಸ್​ ನಿಲ್ಲಿಸದಿದ್ದಕ್ಕೆ ಬಸ್​ನಿಂದ ಹೊರಗೆ ಜಿಗಿದ್ದಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ಶ್ವೇತಾ ಹೂವಿನಹಡಗಲಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್​ ಮತ್ತು ಕಮ್ಯೂನಿಕೇಷನ್​ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು.

ಕಾಲೇಜು ಬಳಿಯ ಬಸ್​ ನಿಲ್ದಾಣದಲ್ಲಿ ಬಸ್ ನಿಲ್ಲಿಸದಿದ್ದಕ್ಕೆ ಶ್ವೇತಾ ಬಸ್​ನಿಂದ ಜಿಗಿದಿದ್ದಳು. ನಿನ್ನೆ (ಏ.12) ಮಧ್ಯಾಹ್ನ ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್​ನಲ್ಲಿ ಘಟನೆ ನಡೆದಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶ್ವೇತಾ ಮೃತಪಟ್ಟಿದ್ದಾಳೆ.

ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟೆಲ್​ ಶ್ವೇತಾ ವಾಸವಿದ್ದಳು. ಶ್ವೇತಾಳ ಸಾವಿನಿಂದ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದ್ದಾರೆ.

ಘಟನೆ ಬಳಿಕ ಸಾರಿಗೆ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೂವಿನಹಡಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)