ನ್ಯೂಸ್

100 ಕುಟುಂಬಗಳಿಗೆ 'ಖುಷಿ' ಹಂಚಿದ ನಟ ವಿಜಯ್​ ದೇವರಕೊಂಡ

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್​, 'ಅರ್ಜುನ್​ ರೆಡ್ಡಿ' ಖ್ಯಾತಿಯ ನಟ ವಿಜಯ್​ ದೇವರಕೊಂಡ ಮತ್ತು ನಟಿ ಸಮಂತಾ ರುತ್​ ಪ್ರಭು ಜೋಡಿಯಾಗಿ ನಟಿಸಿದ ಪ್ಯಾನ್ ಇಂಡಿಯಾ 'ಖುಷಿ' ಸಿನಿಮಾ ಸೆ.01 ರಂದು ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಗೆ ತಕ್ಕಂತೆ ಗಳಿಕೆಯನ್ನು ಕಂಡಿತು. ಈ ಆದಾಯದಲ್ಲಿ 1 ಕೋಟಿ ರೂ. ಹಣವನ್ನು ನಟ 100 ಕುಟುಂಬಗಳಿಗೆ ಹಂಚಿಕೆ ಮಾಡಿದ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿಬಂದ ರೋಮ್ಯಾಂಟಿಕ್ ಡ್ರಾಮಾ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ವಿಶೇಷ ಘೋಷಣೆಯೊಂದನ್ನು ಮಾಡಿದ ವಿಜಯ್ ದೇವರಕೊಂಡ, ನಮ್ಮ ಸಿನಿಮಾ ಮಾಡಿದ ಗಳಿಕೆಯಿಂದ 1 ಕೋಟಿ ರೂ. ಹಣವನ್ನು 100 ಕುಟುಂಬಗಳಿಗೆ (ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ) ಕೊಡುವುದಾಗಿ ಸೆ.05 ರಂದು ಟ್ವೀಟ್​ ಮಾಡಿ ತಿಳಿಸಿದ್ದರು.

ಈ ಹಿಂದೆ ಹೇಳಿದಂತೆ ಇದೀಗ 100 ಕುಟುಂಬಗಳನ್ನು 'ಖುಷಿ' ಚಿತ್ರತಂಡ ಆಯ್ಕೆ ಮಾಡಿದ್ದು, ಕೇವಲ ಆಂಧ್ರಪ್ರದೇಶದ ಮಾತ್ರವಲ್ಲದೆ ಬೆಂಗಳೂರು, ಚೆನ್ನೈ ಸೇರಿದಂತೆ ಇತರ ನಗರಗಳಿಂದ ಕುಟುಂಬಗಳನ್ನು ಸೆಲಕ್ಟ್​ ಮಾಡಲಾಗಿದೆ. ಈ ಬಗ್ಗೆ ಇಂದು ಕೂಡ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ವಿಜಯ್​ ದೇವರಕೊಂಡ, ಈ ಹಣವನ್ನು ಆಯ್ದ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯ್ ದೇವರಕೊಂಡ ಅವರ ಈ ಕಾರ್ಯಕ್ಕೆ ನೆಟ್ಟಿಗರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರದ ಒಟಿಟಿ ರಿಲೀಸ್​ ದಿನಾಂಕ ಶೀಘ್ರವೇ ಅಧಿಕೃತವಾಗಿ ಪ್ರಕಟವಾಗಲಿದೆ,(ಏಜೆನ್ಸೀಸ್).