ತಿರುವನಂತಪುರ: ಘೋಷಿತ ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ( ಐಯುಎಂಎಲ್ ) ಶಾಸಕ ಕೆ.ಎಂ.ಶಾಜಿ ವಿರುದ್ಧ ತನಿಖೆಗೆ ವಿಜಿಲೆನ್ಸ್ ಕೋರ್ಟ್ ಸೋಮವಾರ ಆದೇಶ ನೀಡಿದೆ. ಕೋಳಿಕ್ಕೋಡ್ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಬ್ಯೂರೋ ಎಸ್ಪಿಗೆ ಕೋರ್ಟ್ ಈ ಆದೇಶ ನೀಡಿದ್ದು, ಶಾಸಕರ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶ ಕೆ.ವಿ.ಜಯಕುಮಾರ್ ನಿರ್ದೇಶಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ವಕೀಲ ಎಂ.ಆರ್.ಹರೀಶ್ ಸಲ್ಲಿಸಿದ ದೂರು ಅರ್ಜಿ ಆಧರಿಸಿ ವಿಜಿಲೆನ್ಸ್ ಕೋರ್ಟ್ ಈ ನಿರ್ದೇಶನ ನೀಡಿದೆ. ಕೆ.ಎಂ.ಶಾಜಿ ಅಜಿಕೋಡ್ ಶಾಸಕರಾಗಿದ್ದು, ವಯನಾಡು, ಕಣ್ಣೂರು, ಕೋಳಿಕ್ಕೋಡ್ ಜಿಲ್ಲೆಗಳಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಅಂಶ ದೂರಿನಲ್ಲಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಮಗನ ಬಗ್ಗೆ ರುದ್ರಪ್ಪ ಲಮಾಣಿಯ ಎಕ್ಸ್ಕ್ಲೂಸಿವ್ ಹೇಳಿಕೆ ಇಲ್ಲಿದೆ
ಶಾಜಿ ವಿರುದ್ಧ ಸಾಗರೋತ್ತರ ಹಣಕಾಸು ವಹಿವಾಟಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಕಣ್ಣೂರಿನ ಚಿರಕ್ಕಲ್ನಲ್ಲಿರುವ ಶಾಜಿಯ ಮನೆಯಲ್ಲಿ ಶೋಧ ನಡೆಸಿತ್ತು. ಕೆಲವೇ ದಿನಗಳ ಹಿಂದೆ ಐಯುಎಂಎಲ್ನ ಇನ್ನೊಬ್ಬ ಶಾಸಕ ಎಂ.ಸಿ.ಕಮರುದ್ದೀನ್ ವಿರುದ್ಧ ಚಿನ್ನದ ವ್ಯಾಪಾರದಲ್ಲಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. (ಏಜೆನ್ಸೀಸ್)