ಚಂಡೀಗಡ : ಮಿತಿಮೀರಿದ ಧಗೆಯ ಕಾಲದಲ್ಲಿ ಪಂಜಾಬ್ ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಿರುವ ವಿರುದ್ಧ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೊಹಾಲಿ ಮನೆಯ ಹೊರಗೆ ನೂರಾರು ಆಮ್ ಆದ್ಮಿ ಪಕ್ಷ(ಎಎಪಿ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ವಾಟರ್ ಕಾನನ್ಗಳನ್ನು ಚಲಾಯಿಸಿ ಪ್ರಯತ್ನಿಸಿದರು. ನಂತರ ಈರ್ವರು ನಾಯಕರನ್ನು ವಶಕ್ಕೆ ಪಡೆದರು.
ಅಮರಿಂದರ್ ಸಿಂಗ್ ಅವರ ನಿವಾಸ, ಸಿಸ್ವಾನ್ ಫಾರ್ಮ್ ಹೌಸ್ನ ಹೊರಗಡೆ ಇಂದು ಮಧ್ಯಾಹ್ನ ಗುಂಪು ಸೇರಿದ ಪಂಜಾಬ್ ಎಎಪಿ ಮುಖ್ಯಸ್ಥ ಭಗವಂತ್ ಮನ್ ಮತ್ತು ಇತರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ನಂತರ ಸಿಎಂ ಮನೆಯ ಕಡೆಗೆ ನುಗ್ಗಲು ಆರಂಭಿಸಿದರು. ಇದನ್ನು ತಡೆಯಲು ಪೊಲೀಸರು ನೀರಿನ ಫಿರಂಗಿಗಳನ್ನು ಬಳಸಿದರು.
ರಾಜ್ಯದಲ್ಲಿ ತೀವ್ರ ವಿದ್ಯುತ್ ಅಭಾವ ಉಂಟಾಗಿದ್ದು, ರೈತರಿಗೆ, ಕೈಗಾರಿಕೆಗಳಿಗೆ ಮತ್ತು ನಗರವಾಸಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಎಎಪಿ ಹೇಳಿದೆ. ಎಎಪಿ ಸಂಸದರಾಗಿರುವ ಭಗವಂತ್ ಮನ್ ಮತ್ತು ಶಾಸಕ ಹರಪಾಲ್ ಸಿಂಗ್ ಚೀಮ ಅವರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)