ಸಾವಿರಾರು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಇರುವ ಕಂಟೈನರ್ಗಳನ್ನು ಹೊತ್ತು ರಸ್ತೆಗಳಲ್ಲಿ ಓಡುವ ಟ್ರಕ್ ಗಳಲ್ಲಿ ಇನ್ನೇನೋ ನಡೆಯುತ್ತಿರಬಹುದು ಎಂದು ಒಬ್ಬ ಸಾಮಾನ್ಯ ವ್ಯಕ್ತಿ ಊಹಿಸಲು ಸಾಧ್ಯವಾಗುವುದಿಲ್ಲ . ಅಪರಾಧಿಗಳು ಅಪರಾಧದ ಕೆಲಸ ಮಾಡಲು ಯಾವೆಲ್ಲಾ ವಿಧಾನಗಳನ್ನು ಅನುಸರಿಸುತ್ತಾರೆ ಎಂಬುದಕ್ಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ(Video Viral) ಉದಾಹರಣೆಯಾಗಿದೆ.
ವೈರಲ್ ವಿಡಿಯೋದಲ್ಲಿ ಪೆಟ್ರೋಲ್ ಕಂಟೈನರ್ ಟ್ರಕ್ ಅನ್ನು ಬುಲ್ಡೋಜರ್ ಮೂಲಕ ತೆರೆಯುತ್ತಿರುವುದನ್ನು ಕಾಣಬಹುದು. ಬುಲ್ಡೋಜರ್ನಿಂದ ಟ್ರಕ್‌ನ ಕಂಟೈನರ್‌ನ ಒಂದು ಭಾಗವನ್ನು ಕಟ್ ಮಾಡಲಾಗುತ್ತಿದೆ. ಬಳಿಕ ಅದರೊಳಗಿರುವುದನ್ನು ವಿಡಿಯೋ ಮೂಲಕ ಕಂಡ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿದ್ದವರಿಗೆ ಘಟನೆಯ ಬಗ್ಗೆ ಮೊದಲೇ ಮಾಹಿತಿ ಇತ್ತು. ಅದಕ್ಕಾಗಿಯೇ ಅವರು ಸ್ಥಳದಲ್ಲಿ ಜಮಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಓಪನ್ ಮಾಡಿದ ಕಂಟೈನರ್ ಒಳಗೆ ಹಸುಗಳನ್ನು ಕಾಣಬಹುದಾಗಿದೆ.
ಹಸುಗಳನ್ನು ಹಗ್ಗಗಳಿಂದ ಕಟ್ಟಲಾಗಿದೆ. ಇದರಿಂದ ರಸ್ತೆಯಲ್ಲಿ ಬ್ರೇಕರ್‌ನ ಸಂದರ್ಭದಲ್ಲಿ ಹಸುಗಳು ಬೀಳುವುದನ್ನು ತಪ್ಪಿಸಬಹುದು. ಆದರೆ ಜಾನುವಾರುಗಳನ್ನು ಲಾರಿಯೊಳಗೆ ಸಾಗಿಸುತ್ತಿರುವ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಅಕ್ರಮ ಸಾಗಣೆ ನಡೆಯುತ್ತಿದ್ದ ಲಾರಿ ಮೇಲೆ ಜಾರ್ಖಂಡ್ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ನಂಬರ್ ಪ್ಲೇಟ್ ಮೇಲೆ JK 03 E 5451 ಎಂದು ಬರೆಯಲಾಗಿದೆ.
ಇದುವರೆಗೂ ಈ ವಿಡಿಯೋವನ್ನು 5.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಓ ದೇವರೇ ನಾವು ಈ ಜಗತ್ತಿನಲ್ಲಿ ಏನು ನೋಡುತ್ತಿದ್ದೇವೆ?, ಈ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಹಸು ಕಳ್ಳಸಾಗಣೆದಾರರು ಈಗ ಪೆಟ್ರೋಲ್ ಟ್ರಕ್‌ಗಳಲ್ಲೂ ಕಳ್ಳಸಾಗಣೆ ಆರಂಭಿಸಿದ್ದಾರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಅಂತಹವರ ವಿರುದ್ಧ ಕ್ರಮಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.