ನ್ಯೂಸ್

VIDEO | ವೇದಿಕೆಯಲ್ಲಿ 'ಬ್ಯಾಟಿಂಗ್' ಸಿದ್ಧತೆ ತೋರಿದ ಸಿಧು!

ಚಂಡೀಗಡ : ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್ ಸಿಧು ಅವರು ಇಂದು ಪಂಜಾಬ್​ ಪ್ರದೇಶ ಕಾಂಗ್ರೆಸ್ ಕಮಿಟಿ(ಪಿಪಿಸಿಸಿ)ಯ ನೂತನ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಚಂಡೀಗಡದ ಪಂಜಾಬ್​ ಕಾಂಗ್ರೆಸ್ ಭವನದ ಆವರಣದಲ್ಲಿ ಭಾರೀ ಅಬ್ಬರದ ಸಭೆ ನಡೆಯಿತು.

ವೇದಿಕೆಯಲ್ಲಿ ನೂತನ ಅಧ್ಯಕ್ಷರಾದ ಸಿಧುರನ್ನು ಮಾತನಾಡಲು ಮೈಕ್ ಬಳಿಗೆ ಕರೆಯುತ್ತಿದ್ದ ಕಾರ್ಯಕರ್ತರು, 'ಬಬ್ಬರ್​ ಶೇರ್'​ ಎಂದು ಹೇಳಿ ಬಹುಪರಾಕ್ ಹೇಳುತ್ತಿರುವಂತೆ, ಸಿಧು ಬ್ಯಾಟಿಂಗ್ ಮಾಡುವ ಶೈಲಿಯನ್ನು ಅನುಕರಿಸುತ್ತಾ ಠೀವಿಯಿಂದ ನಡೆದರು. ಹಿರಿಯರಿಗೆ ನಮಸ್ಕರಿಸಿ, ಅಭಿಮಾನಿಗಳತ್ತ ಕೈಬೀಸುತ್ತಾ ನಡೆದ ಸಿಧು ಧಾಟಿಯನ್ನು ಸೆರೆಹಿಡಿದಿರುವ ವಿಡಿಯೋ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವಿಟರ್​​ನಲ್ಲಿ ಶೇರ್ ಮಾಡಿದೆ.

ರಾಜ್ಯದ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಿಪಿಸಿಸಿ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಮತ್ತು ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. ಸಿಧು ಅವರು, ಸಿಎಂ ಅಮರಿಂದರ್ ಸಿಂಗ್ ವಿರುದ್ಧ ಭಾರೀ ಅಬ್ಬರ ಮಾಡಿ ದಕ್ಕಿಸಿಕೊಂಡಿರುವ ನೂತನ ಹುದ್ದೆಯಲ್ಲಿ ಹೇಗೆ 'ಬ್ಯಾಟಿಂಗ್' ಮಾಡುತ್ತಾರೆ ಎಂದು ಕಾದುನೋಡಬೇಕು.