ನ್ಯೂಸ್

VIDEO: ಚಿನ್ನದ ಚೆಂಡಿನಂತೆ ಕಾಣುವ ಸೂರ್ಯ!

ವಾಷಿಂಗ್ಟನ್​: ಸೌರ ಮಂಡಲದ ಕೇಂದ್ರ ಬಿಂದುವಾಗಿರುವ ಸೂರ್ಯನ ಬಗ್ಗೆ ಮಾನವ ಜಗತ್ತಿಗೆ ಎಲ್ಲಿಲ್ಲದ ಕುತೂಹಲ. ಹೀಗಾಗಿ ಅಧ್ಯಯನ ಸಾಗಿಯೇ ಇದೆ. ನಾಸಾ ಕಳೆದ 10 ವರ್ಷಗಳಿಂದ ಸೂರ್ಯನನ್ನು ಚಿತ್ರೀಕರಿಸುತ್ತ ಬಂದಿದೆ. ಅದನ್ನು ಇದೀಗ ಒಂದು ಗಂಟೆಯ ವಿಡಿಯೋದಲ್ಲಿ ಜಗತ್ತಿನ ಮುಂದಿರಿಸುವ ಪ್ರಯತ್ನ ಮಾಡಿದೆ.

ನಾಸಾದ ಸೋಲಾರ್ ಡೈನಾಮಿಕ್ಸ್ ಆಬ್ಸರ್ವೇಟರಿ (ಎಸ್​ಡಿಒ) ಸೂರ್ಯನನ್ನು ಕಳೆದ 10 ವರ್ಷಗಳಿಂದ ನಿರಂತರವಾಗಿ ಮತ್ತು ನಿಯತವಾಗಿ ನೋಡುತ್ತ ಬಂದಿದೆ. ಭೂಮಿಯ ಸುತ್ತಲಿನ ತನ್ನ ಕಕ್ಷೆಯಲ್ಲಿದ್ದುಕೊಂಡು ಸೂರ್ಯನನ್ನು ಚಿತ್ರೀಕರಿಸುವ ಕೆಲಸವನ್ನು ಅದು ಮಾಡಿದೆ. ಈ ಅವಧಿಯಲ್ಲಿ ಅದು 425 ದಶಲಕ್ಷ ಹೈ ರೆಸೊಲ್ಯುಷನ್​ ಇಮೇಜ್​ಗಳನ್ನು ಸಂಗ್ರಹಿಸಿದೆ. ಇದರ ಗಾತ್ರವೇ 20 ದಶಲಕ್ಷ ಗಿಗಾಬೈಟ್ಸ್​ ಡೇಟಾದಷ್ಟಿದೆ.

ಎಸ್​ಡಿಒ ಪ್ರತಿ 0.75 ಸೆಕೆಂಡ್​ ಒಂದರಂತೆ ಸೂರ್ಯನ ಚಿತ್ರವನ್ನು ಸೆರೆಹಿಡಿದಿದೆ. ಅದರಲ್ಲಿನ ಅಟ್ಮೋಸ್ಫಿಯರ್​ ಇಮೇಜಿಂಗ್ ಅಸೆಂಬ್ಲಿ(ಎಐಎ) ಒಂದೇ 12 ಸೆಕೆಂಡ್​ 10 ವಿಭಿನ್ನ ತರಂಗಾಂತರದ ಬೆಳಕಿನಲ್ಲಿ ಫೋಟೊ ತೆಗೆಯುತ್ತ ಸಾಗಿದೆ. 17.1 ನ್ಯಾನೋಮೀಟರ್ಸ್ ತರಂಗಾಂತರದಲ್ಲಿ ಫೋಟೋ ತೆಗೆದಿದೆ. ಇದು ಎಕ್ಸ್​ಟ್ರೀಮ್​ ಅಲ್ಟ್ರಾವಯಲೆಟ್ ತರಂಗಾಂತರವಾಗಿದ್ದು ಸೂರ್ಯನ ಅತ್ಯಂತ ಹೊರಭಾಗದ ವಾತಾವರಣದ ಪದರ ಕೊರೊನಾವನ್ನು ತೋರಿಸುತ್ತದೆ. 10 ವರ್ಷಗಳ ಫೋಟೋಗಳನ್ನು ಸಂಗ್ರಹಿಸಿ ಗಂಟೆಗೊಂದರಂತೆ ಆಯ್ಕೆ ಮಾಡಿಕೊಂಡು 61 ನಿಮಿಷಗಳ ವಿಡಿಯೋವನ್ನು ಸಿದ್ಧಪಡಿಸಲಾಗಿದೆ. ಈ ವಿಡಿಯೋ ಆಲ್ಬಂಗೆ ಬಳಸಿರುವ ಮ್ಯೂಸಿಕ್​ಗೆ ನಾಸಾ "ಸೋಲಾರ್ ಆಬ್ಸರ್ವರ್​" ಎಂದು ಹೆಸರಿಟ್ಟಿದೆ. ಇದನ್ನು ಲಾರ್ಸ್​ ಲಿಯೋನ್ಹಾರ್ಡ್​ ಸಂಯೋಜಿಸಿದ್ದಾರೆ.

ನಾಸಾ ಗೊಡ್ಡಾರ್ಡ್​ ಯೂಟ್ಯೂಬ್ ಚಾನೆಲ್​ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಇದರ ಡಿಸ್ಕ್ರಿಪ್ಶನ್​ನಲ್ಲಿ ವಿಡಿಯೋ ಕುರಿತ ಮಾಹಿತಿ ನೀಡಲಾಗಿದೆ. ಅದರಲ್ಲಿ ಕೆಲವು ದಿನವಹಿ ವಿದ್ಯಮಾನಗಳ ವಿವರವುಳ್ಳ ವಿಡಿಯೋಗಳ ಲಿಂಕ್​ ಕೂಡ ಲಭ್ಯವಿದೆ. ಆಸಕ್ತರು ಗಮನಿಸಬಹುದು. (ಏಜೆನ್ಸೀಸ್)