ಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ದಕ್ಷಿಣ ಭಾಗದಲ್ಲಿರುವ ಬ್ರಿಸ್ಬೇನ್ನ ಸ್ಯಾಮ್ಫೋರ್ಡ್ ವ್ಯಾಲಿಯಿಂದ ಕ್ವೀನ್ಸ್ ಲ್ಯಾಂಡ್ ಪೊಲೀಸರಿಗೆ ಬಂತೊಂದು ತುರ್ತುಕರೆ. ಮಹಿಳೆಯೊಬ್ಬರು ಆ ಕರೆಯನ್ನು ಮಾಡಿದ್ದರು.
'ನನ್ನ ಕಾಲಿಗೆ ಹೆಬ್ಬಾವೊಂದು ಸುತ್ತಿಕೊಂಡಿದೆ. ಬಿಡಿಸಲು ನಿಮ್ಮ ನೆರವು ಬೇಕು' ಎಂಬುದು ತುರ್ತುಕರೆಯ ಸಂದೇಶ. ಅವರ ಈ ತುರ್ತುಕರೆಗೆ ಇಬ್ಬರು ಅಧಿಕಾರಿಗಳು ಕೂಡಲೆ ಸ್ಪಂದಿಸಿದ್ದು, ಕಾರಿನಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಅಲ್ಲಿ ನೋಡಿದರೆ, 2-3 ಮೀಟರ್ ಉದ್ದದ ಹೆಬ್ಬಾವು ಆಕೆಯ ಬಲಗಾಲಿಗೆ ಬಿಗಿಯಾಗಿ ಸುತ್ತುಹಾಕಿಕೊಂಡಿತ್ತು.
ಇದನ್ನೂ ಓದಿ: ಪ್ರವಾಸಕ್ಕೆ ಬಂದವ ಜಲಪಾತದ ಬಂಡೆಯಲ್ಲಿ ಸಿಲುಕಿದ, ಸ್ವಲ್ಪ ಅಲುಗಾಡಿದರೂ ಸಾವು ಕಟ್ಟಿಟ್ಟ ಬುತ್ತಿ! ಮುಂದೇನಾಯ್ತು?
ನೆರವಿಗೆ ಧಾವಿಸಿದ್ದ ಪೊಲೀಸ್ ಅಧಿಕಾರಿಗಳ ಪೈಕಿ ಒಬ್ಬರು ಕೂಡಲೇ ಆಕೆಯ ಬಳಿ ತೆರಳಿ, ಹೇಗಿದ್ದೀರಿ ಎಲ್ಲವೂ ಒಕೆ ಅಲ್ಲವೇ? ಎಂದು ಪ್ರಶ್ನಿಸುತ್ತ, ನೀವೇನು ಹಾವನ್ನು ತಟ್ಟುತ್ತಿದ್ದೀರಾ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅದೇ ವೇಳೆ ಆ ಮಹಿಳೆ ಹಾವಿನ ತಲೆಯನ್ನು ಹಿಡಿದೆತ್ತಿದರೆ, ಅಧಿಕಾರಿ ನಿಧಾನವಾಗಿ ಆಕೆಯ ಕಾಲಿಗೆ ಸುತ್ತು ಹಾಕಿದ್ದ ಹೆಬ್ಬಾವನ್ನು ಬಿಡಿಸತೊಡಗಿದರು. ನಂತರ ಆ ಮಹಿಳೆಯೇ ಅದನ್ನು ಬಿಗಿಯಾಗಿ ಹಿಡಿದು ಪಕ್ಕದಲ್ಲೇ ಇದ್ದ ಪೊದೆಗೆ ಬಿಟ್ಟರು.
ಪೊಲೀಸರಿಗೆ ಧನ್ಯವಾದಗಳನ್ನು ಸಲ್ಲಿಸಿದ ಆ ಮಹಿಳೆ, ಸ್ನೇಹಿತರು ಯಾರಾದರೂ ಹತ್ತಿರದಲ್ಲೇ ಇದ್ದಿದ್ದರೆ ಅವರ ನೆರವಿನೊಂದಿಗೆ ಬಿಡಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾಗಿ ವರದಿಯಾಗಿದೆ. ಕ್ವೀನ್ಸ್ ಲ್ಯಾಂಡ್ ಪೊಲೀಸರು ಈ ವಿಡಿಯೋವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ. (ಏಜೆನ್ಸೀಸ್)