ನ್ಯೂಸ್

ತೆರಿಗೆದಾರರಿಗೆ ವಿಡಿಯೋ ಕಾನ್ಫರೆನ್ಸ್ ಮೌಖಿಕ ವಿಚಾರಣೆ: ಹಕ್ಕೊತ್ತಾಯಕ್ಕೆ ಆದಾಯ ಇಲಾಖೆಯ ಒಪ್ಪಿಗೆ; ಇ-ವೆರಿಫಿಕೇಷನ್​ಗೆ ಫೆ.28ರವರೆಗೆ ಅವಕಾಶ

ನವದೆಹಲಿ: ತೆರಿಗೆದಾರನ ಹಕ್ಕು ಚಲಾವಣೆಗೆ ಆದಾಯ ತೆರಿಗೆ ಇಲಾಖೆ ಇದೇ ಮೊದಲ ಬಾರಿಗೆ ಅವಕಾಶ ನೀಡಿದೆ. ಇದರಂತೆ, ಇನ್ನು ಮೇಲೆ ಇಲಾಖೆಯ ಮೌಖಿಕ ವಿಚಾರಣೆಯನ್ನು ತೆರಿಗೆದಾರ ನೇರವಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಎದುರಿಸಬಹುದು. ನ್ಯಾಷನಲ್ ಫೇಸ್​ಲೆಸ್ ಅಪೀಲ್ (ಎನ್​ಎಫ್​ಎ) ಸ್ಕೀಮ್ ಭಾಗವಾಗಿ ಇದನ್ನು ಆದಾಯ ಇಲಾಖೆ ಜಾರಿಗೊಳಿಸಿದೆ. ಇದಕ್ಕೂ ಮೊದಲು ವಿಡಿಯೋ ಕಾನ್ಪರೆನ್ಸ್ ಮೂಲಕ ಮೌಖಿಕ ವಿಚಾರಣೆಗೆ ತೆರಿಗೆದಾರ ಹಾಜರಾಗುವುದಕ್ಕೆ ಅವಕಾಶ ನೀಡುವುದು ಇಲಾಖೆಯ ಅಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿತ್ತು. ಈ ಹೊಸ ಉಪಕ್ರಮವನ್ನು ಇಲಾಖೆ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಪರಿಚಯಿಸಿತ್ತು. ಆದಾಗ್ಯೂ, ಈ ವಿಚಾರಕ್ಕೆ ಸಂಬಂಧಿಸಿ ವ್ಯಾಜ್ಯಗಳು ಉಂಟಾದ ಕಾರಣ ಅನೇಕ ಕೋರ್ಟ್​ಗಳು ಇಂತಹ ಅವಕಾಶ ನೀಡಬಾರದು ಎಂದು ಹೇಳಿದ್ದವು. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಕೇಂದ್ರ ಹಣಕಾಸು ಸಚಿವಾಲಯ ಫೇಸ್​ಲೆಸ್ ಅಪೀಲ್ ಸ್ಕೀಮ್ 2021 ಅನ್ನು ಪರಿಷ್ಕರಿಸಿ ಜಾರಿಗೊಳಿಸಿತು. ಇದು ಹಳೆಯ ಸ್ಕೀಮ್ ಜಾಗದಲ್ಲಿ ಜಾರಿಗೆ ಬಂದಿದೆ.

ಹೊಸ ಉಪಕ್ರಮದಲ್ಲಿ ಸೆಕ್ಷನ್ 12ರಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇದರ ಪ್ರಕಾರ, ಆದಾಯ ತೆರಿಗೆ ಸಂಬಂಧಿಸಿದ ವಿಚಾರವಾಗಿ ವಿವರಣೆ ನೀಡುವುದಕ್ಕಾಗಿ ಸಂಬಂಧಿತ ತೆರಿಗೆದಾರ ನೇರವಾಗಿಯೋ ಅಥವಾ ಅವರ ಪ್ರತಿನಿಧಿಯನ್ನೋ ವಿವರಣೆ ನೀಡುವುದಕ್ಕೆ ಕಳುಹಿಸಬೇಕಾಗಿಲ್ಲ. ಎನ್​ಎಫ್​ಎ ಸೆಂಟರ್ ಅಥವಾ ಸಂಬಂಧಿತ ಅಪೀಲ್ ಘಟಕದಲ್ಲಿ ವಿವರಣೆ ನೀಡಿದರೆ ಸಾಕು.

ಸಿಐಟಿ-ಎಗೆ ಹೆಚ್ಚಿದ ಬಲ: ಪರಿಷ್ಕರಿಸಲ್ಪಟ್ಟ ಹೊಸ ನಿಯಮ ಪ್ರಕಾರ, ಎಲ್ಲ ಅಧಿಕಾರ ಈಗ ಏಕೀಕರಣಗೊಂಡು ಕಮಿಷನರ್ ಆಫ್ ಇನ್​ಕಂ ಟ್ಯಾಕ್ಸ್ -ಅಪೀಲ್ (ಸಿಐಟಿ(ಎ))ನ ಬಲ ಹೆಚ್ಚಾಗಿದೆ. ಸಿಐಟಿ(ಎ) ಇನ್ನು ಕರಡು ಆದೇಶ ಪ್ರಕಟಿಸ ಬೇಕಾಗಿಲ್ಲ. ಅಥವಾ ಅದು ನೀಡಿದ ಆದೇಶವನ್ನು ಇನ್ನೊಂದು ಘಟನ ಅಥವ ಇನ್ನೊಂದು ಸಿಐಟಿ(ಎ) ಪರಿಶೀಲಿಸಬೇಕಾಗಿಲ್ಲ. ಸಿಐಟಿ(ಎ) ಕರಡು, ಆದೇಶ ಅಂತಿಮಗೊಳಿಸುವ ಅಧಿಕಾರವನ್ನು ಪಡೆದುಕೊಂಡಿದೆ. ಈ ಆದೇಶವನ್ನು ಅಹವಾಲು ದಾರನೊಂದಿಗೆ ಫೇಸ್​ಲೆಸ್ ಅಪೀಲ್ ಸೆಂಟರ್ ಮೂಲಕ ಹಂಚಿಕೊಳ್ಳಬಹುದಾಗಿದೆ. ಇದು ಹಿಂದೆ ‘ಅಪೀಲ್ ಘಟಕ’ವನ್ನು ಆಧರಿಸಿ ಇತ್ತು.

ವೈಯಕ್ತಿಕ ವಿಚಾರಣೆಯ ವಿನಂತಿ: ಹೊಸ ಉಪಕ್ರಮದ ಪ್ರಕಾರ ತೆರಿಗೆದಾರ ಅಥವಾ ಆತನ ಪ್ರತಿನಿಧಿ ವೈಯಕ್ತಿಕ ವಿಚಾರಣೆಯ ವಿನಂತಿ ಮಾಡಿಕೊಳ್ಳಬಹುದು. ಎನ್​ಎಫ್​ಎ ಸೆಂಟರ್​ನಲ್ಲಿ ಸಂಬಂಧಿತ ಆಯುಕ್ತರಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ವಿವರಣೆ ಕೊಡಬಹುದು. ಸಂಬಂಧಿತ ಆಯುಕ್ತರು ಕೂಡ ಇಂತಹ ಮನವಿಯನ್ನು ಅಂಗೀಕರಿಸಬೇಕು. ಅದೇ ರೀತಿ, ನಿಶ್ಚಿತ ಸೆಂಟರ್, ದಿನಾಂಕ ಮತ್ತು ಸಮಯವನ್ನು ಕೂಡ ನಿಗದಿಪಡಿಸಿ ತೆರಿಗೆದಾರ ಅಥವಾ ಅವರ ಪ್ರತಿನಿಧಿಗೆ ತಿಳಿಸಬೇಕು.

ಅವಧಿ ವಿಸ್ತರಣೆ: ಆದಾಯ ತೆರಿಗೆ ರಿಟರ್ನ್ಸ್​ಗೆ ಸಂಬಂಧಿಸಿದ ಇ-ವೆರಿಫಿಕೇಷನ್ ಅವಧಿಯನ್ನು ಆದಾಯ ತೆರಿಗೆ ಇಲಾಖೆ 2022ರ ಫೆ.28ರ ತನಕ ವಿಸ್ತರಿಸಿದೆ. ಇದರ ಪ್ರಕಾರ, 2019-20ರ ಐಟಿಆರ್ ಅನ್ನು ಇನ್ನೂ ಇ-ವೆರಿಫೈ ಮಾಡದವರು ಕಡ್ಡಾಯವಾಗಿ ಮಾಡಬೇಕು. ಅದಕ್ಕೆ ಈ ವಿಸ್ತರಿತ ಅವಧಿಯನ್ನು ಬಳಸಿಕೊಳ್ಳಬಹುದು. ಇ-ವೆರಿಫಿಕೇಷನ್ ಎಂದರೆ ತೆರಿಗೆದಾರರು ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕ ಆಧಾರ್ ಒಟಿಪಿ ಅಥವಾ ನೆಟ್ ಬ್ಯಾಂಕಿಂಗ್ ಮತ್ತು ಇತರೆ ವಿಧಾನಗಳ ಮೂಲಕ ಎಲೆಕ್ಟ್ರಾನಿಕ್ ಆಗಿ ದೃಢೀಕರಿಸುವ ಪ್ರಕ್ರಿಯೆ. ಇದನ್ನು ಸಾಮಾನ್ಯವಾಗಿ ಐಟಿ ರಿಟರ್ನ್ಸ್ ಸಲ್ಲಿಸಿದ 120 ದಿನಗಳ ಒಳಗೆ ಮಾಡಬೇಕು. 2020-21 ಅಸೆಸ್​ವೆುಂಟ್ ವರ್ಷದ ಐಟಿಆರ್ ಸಲ್ಲಿಸಿದವರ ಪೈಕಿ ಬಹಳಷ್ಟು ಜನ ಇ-ವೆರಿಫೈ ಮಾಡಿಲ್ಲ. ಇದು ಮಾಡದೇ ಹೋದರೆ ಐಟಿಆರ್ ಅಂಗೀಕರಿಸಲ್ಪಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.