ಗಾಂಧಿನಗರ: ವಿಶ್ವ ಎದುರಿಸುತ್ತಿರುವ ಅನೇಕ ಅನಿಶ್ಚಿತತೆಗಳ ನಡುವೆ ಭಾರತವು ಭರವಸೆಯ ಹೊಸ ಕಿರಣವಾಗಿ ಹೊರಹೊಮ್ಮಿದೆ. ಜಗತ್ತು ಭಾರತವನ್ನು ಸ್ಥಿರತೆಯ ಆಧಾರ ಸ್ತಂಭ, ವಿಶ್ವಾಸಾರ್ಹ ಸ್ನೇಹಿತ ಮತ್ತು ಪ್ರಗತಿಯ ಎಂಜಿನ್ ಆಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 10ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಗವಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ಭಾರತವು ‘ವಿಶ್ವಮಿತ್ರ’ (ವಿಶ್ವದ ಸ್ನೇಹಿತ) ಆಗಿ ಮುನ್ನಡೆಯುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಮುಖ ರೇಟಿಂಗ್ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ನಾವು ಗುರಿಗಳನ್ನು ನಿರ್ಧರಿಸಿ, ಅವುಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನು ಭಾರತ ಜಗತ್ತಿಗೆ ನೀಡಿದೆ. ಭಾರತ ವಿಶ್ವ ಕಲ್ಯಾಣಕ್ಕಾಗಿ ಬದ್ಧತೆ, ಕಠಿಣ ಪರಿಶ್ರಮ ಪಡುತ್ತಿದೆ. ಪ್ರಪಂಚವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿಸಲು ಯತ್ನಿಸುತ್ತಿದೆ ಎಂದು ಮೋದಿ ಹೇಳಿದರು.
ಜನಕೇಂದ್ರಿತ ಅಭಿವೃದ್ಧಿಯಲ್ಲಿ ಭಾರತ ನಂಬಿಕಸ್ಥ ಪಾಲುದಾರ ದೇಶವಾಗಿದೆ. ಜಾಗತಿಕ ಒಳಿತಿಗೆ ಶ್ರಮಿಸುವ, ಜಾಗತಿಕ ಆರ್ಥಿಕತೆ, ನವೀನ ತಂತ್ರಜ್ಞಾನದ ಕೇಂದ್ರವಾಗಿದೆ. ಪ್ರತಿಭಾವಂತ ಯುವಕರು ದೇಶದ ಶಕ್ತಿಕೇಂದ್ರವಾಗಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲಿದೆ. ಇದು ಮೋದಿ ಗ್ಯಾರಂಟಿಯಾಗಿದೆ ಎಂದು ಅವರು ಘೋಷಣೆ ಮಾಡಿದರು.
ಪ್ರಮುಖ ಆದ್ಯತೆಗಳು: ಭಾರತದ ಆದ್ಯತೆಗಳು ಸ್ಪಷ್ಟವಾಗಿವೆ. ಸುಸ್ಥಿರ ಉದ್ಯಮ, ಮೂಲಸೌಕರ್ಯ ಮತ್ತು ಉತ್ಪಾದನೆ, ಹೊಸ ಯುಗದ ಕೌಶಲ್ಯಗಳು, ತಂತ್ರಜ್ಞಾನ, ಎಐ ಮತ್ತು ನಾವೀನ್ಯತೆ, ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಶಕ್ತಿ, ಸೆಮಿಕಂಡಕ್ಟರ್ ಮತ್ತು ಅದರ ಸಂಪೂರ್ಣ ಪರಿಸರ ವ್ಯವಸ್ಥೆ ರೂಪಿಸಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.
ಅದಾನಿ ರೂ.2 ಲಕ್ಷ ಕೋಟಿ ಹೂಡಿಕೆ: ಗುಜರಾತ್ನಲ್ಲಿ ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಉದ್ಯಮಿ ಗೌತಮ್ ಅದಾನಿ ಘೊಷಿಸಿದ್ದಾರೆ. ವಿಶ್ವದ ಅತಿದೊಡ್ಡ ಶುದ್ಧ ಇಂಧನ ಯೋಜನೆಯನ್ನು ಗುಜರಾತ್ನಲ್ಲಿ ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೌರ ಮಾಡ್ಯೂಲ್ಗಳು, ವಿಂಡ್ ಟರ್ಬೆನ್ಗಳು ಮತ್ತು ಹೈಡ್ರೋಜನ್ ಎಲೆಕ್ಟ್ರೋಲೈಜರ್ಗಳ ತಯಾರಿಕೆ ಘಟಕವನ್ನು ನಿರ್ವಿುಸಲಾಗುತ್ತಿದೆ. 725 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ವಿಶ್ವದ ಅತಿದೊಡ್ಡ ಹಸಿರು ಶಕ್ತಿ ಉದ್ಯಾನವನವನ್ನು ನಿರ್ವಿುಸಲಾಗುತ್ತಿದೆ. ಇದು ಸೌರ ಶಕ್ತಿಯಿಂದ 30 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಜತೆಗೆ ನವೀಕರಿಸಬಹುದಾದ ಇಂಧನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಈ ಮೂಲಕ 1 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಯಾಗಲಿದೆ.
ಮೋದಿ ಅತ್ಯಂತ ಯಶಸ್ವಿ ಪ್ರಧಾನಿ: ನರೇಂದ್ರ ಮೋದಿ ಅವರು ಭಾರತದ ಅತ್ಯಂತ ಯಶಸ್ವಿ ಪ್ರಧಾನಿ. ಪ್ರಸ್ತುತ ಪೀಳಿಗೆಯ ಶ್ರೇಷ್ಠ ಜಾಗತಿಕ ನಾಯಕ ಎಂದು ಉದ್ಯಮಿ ಮುಖೇಶ್ ಅಂಬಾನಿ ಹೇಳಿದ್ದಾರೆ. ಮೋದಿ ಮಾತನಾಡುವಾಗ ಇಡೀ ಜಗತ್ತು ಕೇಳುವುದಷ್ಟೇ ಅಲ್ಲ, ಚಪ್ಪಾಳೆ ತಟ್ಟುತ್ತದೆ. ವಿಕಸಿತ ಭಾರತಕ್ಕೆ ಅವರು ಭದ್ರ ಬುನಾದಿ ಹಾಕಿದ್ದಾರೆ. ಅಮೃತ್ ಕಾಲದಲ್ಲಿ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. 2047ರ ವೇಳೆಗೆ ದೇಶ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು.
ಹಸಿರು ಇಂಧನ ಬೆಳವಣಿಗೆ: ಹತ್ತು ವರ್ಷಗಳಲ್ಲಿ ಭಾರತ ಹಸಿರು ಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ವೇಗವಾಗಿ ಚಲಿಸುತ್ತಿದೆ. ಹಸಿರು ಶಕ್ತಿಯಲ್ಲಿ ಮೂರು ಪಟ್ಟು ಮತ್ತು ಸೌರ ಶಕ್ತಿ ಸಾಮರ್ಥ್ಯದಲ್ಲಿ ಇಪ್ಪತ್ತು ಪಟ್ಟು ಹೆಚ್ಚಳವಾಗಿದೆ. ಪ್ರತಿ ಹಳ್ಳಿಗೆ ಆಪ್ಟಿಕಲ್ ಫೈಬರ್ನ ವಿಸ್ತರಣೆ ಮತ್ತು 5ಜಿ ವಿಸ್ತರಣೆಯಾಗಿದ್ದು, ಸಾಮಾನ್ಯ ಜನರ ಜೀವನವನ್ನು ಬದಲಾಯಿಸಿದೆ. ನಾವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ವ್ಯವಸ್ಥೆ ಹೊಂದಿದ ದೇಶವಾಗಿದ್ದೇವೆ ಎಂದು ಅವರು ಹೇಳಿದರು.
ಭಾರತಕ್ಕೆ ಇದು ಅಮೃತ ಕಾಲ: ಭಾರತ ಕಳೆದ ಒಂದು ದಶಕದಲ್ಲಿ ರಚನಾತ್ಮಕ ಸುಧಾರಣೆ ಗಳಿಂದ ವಿಶ್ವದ ಗಮನ ಸೆಳೆದಿದೆ. ಈ ಸುಧಾರಣೆಗಳು ಭಾರತದ ಆರ್ಥಿಕತೆಯ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿವೆ. ಮುಂದಿನ 25 ವರ್ಷಗಳು ಭಾರತಕ್ಕೆ ಅಮೃತ ಕಾಲವಾಗಿದ್ದು, ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಸಾಮೂಹಿಕ ಪ್ರಯತ್ನದಿಂದ 21ನೇ ಶತಮಾನದ ಭಾರತದ ಭವಿಷ್ಯ ಉಜ್ವಲವಾಗಲಿದೆ. ಜಿ-20 ಅಧ್ಯಕ್ಷನಾಗಿ ಭಾರತವು ಜಾಗತಿಕ ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ಒದಗಿಸಿದೆ. ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಭಾರತ ತನ್ನ ಪಾಲುದಾರಿಕೆಯನ್ನು ನಿರಂತರವಾಗಿ ಬಲಪಡಿಸುತ್ತಿದೆ. ಸರ್ಕಾರವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮರುಬಂಡವಾಳೀಕರಣ ಮತ್ತು ಮಾಹಿತಿ ತಂತ್ರಜ್ಞಾನದ ಬಳಕೆಯ ಮೂಲಕ ಬಲಗೊಳಿಸಿದೆ. ವ್ಯವಹಾರಗಳನ್ನು ಸುಲಭಗೊಳಿಸಿದೆ. ಭಾರತವನ್ನು ಜಾಗತಿಕ ವ್ಯಾಪಾರಕ್ಕೆ ಹೆಚ್ಚು ಆಕರ್ಷಕ ತಾಣವನ್ನಾಗಿ ಮಾಡಲು ಮೂರು ಎಫ್ಟಿಎಗಳಿಗೆ ಸಹಿ ಹಾಕಲಾಗಿದೆ. ಇಂದು ಭಾರತ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಯನ್ನು ಮಾಡುತ್ತಿದೆ ಎಂದು ಮೋದಿ ಹೇಳಿದರು.
ಯುಎಇ ಅಧ್ಯಕ್ಷ ಮುಖ್ಯ ಅತಿಥಿ: ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆಗಮಿಸಿದ್ದರು. ಹಲವು ದೇಶಗಳ ಮುಖ್ಯಸ್ಥರು, ದೇಶ, ವಿದೇಶಗಳ ಉನ್ನತ ಕಂಪನಿಗಳ ಸಿಇಒಗಳು ಭಾಗವಹಿಸಿದ್ದರು.