ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿರುವ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಮತ್ತು ಉತ್ತರ ಪ್ರದೇಶ ರಾಜ್ಯಾದ್ಯಂತ ದೀಪಾವಳಿಯಂತಹ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಯೋಜಿಸಿವೆ.
ಭಗವಾನ್ ಶ್ರಿ ರಾಮನ ಜನ್ಮಸ್ಥಳವೆನ್ನಲಾದ ಅಯೋಧ್ಯೆಯಲ್ಲಿ, ಅದೇ ದಿನ ದೀಪಾವಳಿಯಂತಹ ಸಂಭ್ರಮದ ಹಬ್ಬ ಆಚರಿಸುವ ಮೂಲಕ ಭೂಮಿ ಪೂಜೆ ಕಾರ್ಯಕ್ರಮವನ್ನು ಅವಿಸ್ಮರಣೀಯ ದಿನವನ್ನಾಗಿ ಮಾಡಲು ಸ್ಥಳೀಯರಿಗೆ ಕರೆ ನೀಡಲಾಗಿದೆ.
ಆಚರಣೆಯ ಅಂಗವಾಗಿ, ಅಯೋಧ್ಯೆಯ ಎಲ್ಲ ದೇವಾಲಯಗಳನ್ನು ಸಂಜೆ ಹಣತೆ ದೀಪಗಳಿಂದ ಅಲಂಕರಿಸಲಾಗುತ್ತದೆ. ಭೂಮಿ ಪೂಜೆ ದಿನದಂದು ಅಯೋಧ್ಯೆಯ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಹ ನೆರವೇರಿಸಲಾಗುವುದು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನ
ರಾಜ್ಯದ ಉಳಿದ ಭಾಗಗಳ ಜನರಿಗೆ ತಮ್ಮ ಮನೆಗಳ ಪ್ರವೇಶದ್ವಾರದಲ್ಲಿ ಹಣತೆ ದೀಪ ಬೆಳಗಿಸುವಂತೆ ವಿಎಚ್‌ಪಿ ತಿಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
"ಭೂಮಿಪೂಜಾ ಸಮಾರಂಭವನ್ನು ವಿಶೇಷವಾಗಿ ಗುರುತಿಸಲು ಆಗಸ್ಟ್ 5 ರಂದು ಸಂಜೆ ವಿಶೇಷ ಪೂಜೆ (ಆರತಿ) ನಡೆಸಲು ವಿಎಚ್‌ಪಿ ತಿಳಿಸಿದೆ ಎಂದು ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ತಿಳಿಸಿದ್ದಾರೆ.
ವಿಎಚ್‌ಪಿ ತನ್ನ ಶಿಲಾನ್ಯಾಸ ದಿನವನ್ನು ಪ್ರತಿವರ್ಷ ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ಆಚರಿಸುತ್ತದೆ, ಅದು ಈ ವರ್ಷ ಆಗಸ್ಟ್ 3 ರಂದು ಬರುತ್ತದೆ. ವಿಎಚ್‌ಪಿ ಶಿಲಾನ್ಯಾಸ ದಿನ ಮತ್ತು ರಾಮ ಮಂದಿರದ ಭೂಮಿಪೂಜೆ ದಿನದ ಸಂಕೇತವಾಗಿ ವಿಎಚ್‌ಪಿ ಆಗಸ್ಟ್ 9 ರಿಂದ ರಾಜ್ಯಾದ್ಯಂತ ಎಂಟು ದಿನಗಳ ಆಚರಣೆಗೆ ಯೋಜಿಸಿದೆ.
ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದು ನಿಶ್ಚಿತ: ಟ್ರಸ್ಟ್ನಿಂದ ಅಧಿಕೃತ ಮಾಹಿತಿ
" ಹಳ್ಳಿಗಳಲ್ಲಿ ರಾಮ ಮಂದಿರದ ಭೂಮಿ ಪೂಜೆಯ ಅಂಗವಾಗಿ ಕಾರ್ಯಗಳನ್ನು ಆಯೋಜಿಸಲಾಗುವುದು. ಈ ಕುರಿತು ವಿಶೇಷ ಕರಪತ್ರಗಳನ್ನು ಸಿದ್ಧಪಡಿಸಲಾಗಿದೆ,
ಇದರಲ್ಲಿ ರಾಮ್ ಮಂದಿರ ಆಂದೋಲನದ ಇತಿಹಾಸ ಮತ್ತು ರಾಮ ಮಂದಿರ ಪರವಾಗಿ ಸುಪ್ರೀಂ ಕೋರ್ಟ್ 2019ರ ನವೆಂಬರ್ 9 ರಂದು ನೀಡಿದ ತೀರ್ಪು ಕುರಿತ ವಿವರ ಇದೆ ಎಂದು ಶರ್ಮಾ ತಿಳಿಸಿದರು.