ನ್ಯೂಸ್

ಹಿರಿಯ ನಟಿ ಬಿ. ಸರೋಜಾದೇವಿ ನಿಧನ; ನಾರಾಯಣ ನೇತ್ರಾಲಯಕ್ಕೆ 'ನೇತ್ರ' ದಾನ| b-saroja-devi

ಬೆಂಗಳೂರು; ಬಹುಭಾಷಾ ನಟಿ ಹಾಗೂ ಹಿರಿಯ ಕಲಾವಿದೆಯಾದ ಸರೋಜಾದೇವಿ ಅವರು ನಿಧನರಾಗಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲೂ ನಾಯಕಿಯಾಗಿ ಮಿಂಚಿದ್ದ ಸರೋಜಾದೇವಿ ಅವರು ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಖ್ಯಾತ ನಟಿಯ ನಿಧನಕ್ಕೆ ಇಡೀ ಸ್ಯಾಂಡಲ್​ವುಡ್​ ಕಂಬನಿ ಮಿಡಿದಿದೆ.

1938 ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ. ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್‌ಕುಮಾರ್ ನಟನೆಯ 'ನಟಸಾರ್ವಭೌಮ' ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್​ಕುಮಾರ್ ನಿಧನದ ಬಳಿಕ ಅವರ ಕಣ್ಣುಗಳನ್ನು ದಾನ ಮಾಡಲಾಯ್ತು. ನಂತರ ಅವರ ಹಾದಿಯಲ್ಲೇ ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳನ್ನು ಕೂಡ ದಾನ ಮಾಡಲಾಯ್ತು. ಇದೀಗ ನಟಿ ಸರೋಜಾದೇವಿ ಅವರು ಸಹ ನೇತ್ರದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹಲವು ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದ ಹಿರಿಯ ನಟಿ ಬಿ. ಸರೋಜಾದೇವಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ವೈದ್ಯರು ಆಗಮಿಸಿ ಅವರ ಕಣ್ಣುಗಳನ್ನು ತೆಗೆದುಕೊಂಡಿದ್ದಾರೆ.

(ಏಜೆನ್ಸೀಸ್)

ನಾಳೆ (15) ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸರೋಜಾದೇವಿ ಅವರ ತೋಟದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತ್ಯಕ್ರಿಯೆ ನಡೆಯಲಿರುವ ಸ್ಥಳವನ್ನು ಸಿಬ್ಬಂದಿ ಸ್ವಚ್ಛ ಮಾಡುತ್ತಿದ್ದಾರೆ.

ಅಮರ ಶಿಲ್ಪಿ ಜಕಣಾಚಾರಿ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣ ರುಕ್ಷ್ಮಿಣಿ ಸತ್ಯಭಾಮಾ, ಲಕ್ಷ್ಮೀಸರಸ್ವತಿ, ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನ ಪಾಟ್ನಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯ ಆಶಾ, ಮೆಹಂದಿ ಲಗ ಕೆ ರಖನಾ, ಮಲೆಯಾಳಂನ ಮುತ್ತುಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.