ವಸಂತ ಪಂಚಮಿಯಂದು ನಾವೆಲ್ಲರು ಸರಸ್ವತಿಯ ಪೂಜೆಯನ್ನು ಮಾಡುತ್ತೇವೆ. ವಸಂತ ಪಂಚಮಿಯು ವಸಂತ ಋತುವಿನ ಪ್ರಾರಂಭವನ್ನು ಸೂಚಿಸುತ್ತದೆ. ಋತುಗಳಲ್ಲೇ ಅತ್ಯಂತ ಶ್ರೇಷ್ಠವಾದ ಋತುವು ವಸಂತ ಋತು. ಚಳಿಗಾಲ ಮುಗಿಯುತ್ತಾ, ಹೆಚ್ಚು ಸೂರ್ಯನ ಬೆಳಕು ಬರುತ್ತದೆ. ಅದಲ್ಲದೆ ಸರಸ್ವತಿ ದೇವಿ ಆವಿರ್ಭವಿಸಿದ ಪುಣ್ಯ ದಿನವೂ ಹೌದು. ಸರಸ್ವತಿ ಪೂಜೆ, ವಸಂತ ಪಂಚಮಿ, ಶ್ರೀಪಂಚಮಿ, ಗ್ಯಾನ ಪಂಚಮಿ ಮುಂತಾದ ಹೆಸರುಗಳಿಂದಲೂ ಈ ಹಬ್ಬವನ್ನು ಕರೆಯುತ್ತಾರೆ.
ಸರಸ್ವತಿ ವಿದ್ಯಾ ಅಧಿದೇವತೆ. ಅವಳ ಸ್ವರೂಪವೇ ಅದನ್ನು ತಿಳಿಸುತ್ತದೆ. ವೀಣೆ, ಅಕ್ಷಮಾಲ, ಪುಸ್ತಕವನ್ನು ತನ್ನ ನಾಲ್ಕು ಕೈಗಳಲ್ಲಿ ಹಿಡಿದಿದ್ದಾಳೆ. ವೀಣೆಯು ಸುಂದರವಾದ ಸಂಗೀತವನ್ನು ಅಥವಾ ನಾದವನ್ನು ಹೊಮ್ಮಿಸುತ್ತದೆ. ಅದು ಶಬ್ದ ಬ್ರಹ್ಮದ ಪ್ರತೀಕ. ಜಗತ್ತಿನ ಉತ್ಪತ್ತಿ ಶಬ್ದದಿಂದ ಉಂಟಾಗಿದೆ ಎಂದು ಶಾಸ್ತ್ರಗ್ರಂಥಗಳು ನಮಗೆ ತಿಳಿಸುತ್ತವೆ. ಪುಸ್ತಕವು ಅಪರಾವಿದ್ಯೆಯನ್ನು ಹಾಗೂ ಅಕ್ಷಮಾಲೆ ಪರಾವಿದ್ಯೆಯನ್ನು ಸೂಚಿಸುತ್ತದೆ. ಅವಳು ಪರಾ ಹಾಗೂ ಅಪರಾ ವಿದ್ಯೆಗೆ ಅಧಿದೇವತೆ. ಅವಳ ವಾಹನ ಹಂಸ.
ನೀರು ಮತ್ತು ಹಾಲನ್ನು ಬೆರಸಿ ಹಂಸಕ್ಕೆ ಕೊಟ್ಟರೆ, ಅದು ನೀರನ್ನು ಬೇರ್ಪಡಿಸಿ, ಕೇವಲ ಹಾಲನ್ನು ಕುಡಿಯುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ನಾವು ವಿವೇಕ ಜ್ಞಾನದ ನೆರವಿನಿಂದ ಒಳಿತು-ಕೆಡುಕುಗಳ ಭೇದವನ್ನು ಅರಿತು, ಒಳ್ಳೆಯದನ್ನು ಮಾತ್ರ ಸ್ವೀಕರಿಸಬೇಕು ಎಂಬ ಬಹುಮುಖ್ಯ ಪಾಠವನ್ನು ಕಲಿಯಬಹುದು. ಸರಸ್ವತಿ ದೇವಿ ಜ್ಞಾನ ಸ್ವರೂಪಿಣಿ. ಹೊಸ ಹೊಸ ಅನ್ವೇಷಣೆಗಳು ಜ್ಞಾನದಿಂದಲೇ ಸಾಧ್ಯ. ಆದ್ದರಿಂದಲೇ ಸರಸ್ವತಿ ಯನ್ನು ನಮ್ಮ ಸಂಸ್ಕೃತಿಯಲ್ಲಿ ಅಷ್ಟು ಗೌರವಿಸಿರುವುದು. ಅಲ್ಲದೆ ಮಕ್ಕಳ ವಿದ್ಯಾರಂಭವನ್ನು ಸರಸ್ವತಿಗೆ ನಮಿಸಿ ಪ್ರಾರಂಭಿಸುತ್ತಾರೆ.
ಅನೇಕ ಶಾಲೆಗಳಲ್ಲಿ ಈ ಸಮಯದಲ್ಲಿ ಸರಸ್ವತಿ ಪೂಜೆಯನ್ನು ಮಾಡಿ ಎಲ್ಲ ಮಕ್ಕಳು ತಮ್ಮಪರೀಕ್ಷೆಗಳನ್ನು ಚೆನ್ನಾಗಿ ಮಾಡಲೆಂದು ಪ್ರಾರ್ಥಿಸಿಕೊಳ್ಳುತ್ತಾರೆ. ಜ್ಞಾನ ದೇವತೆಯಾದ ಸರಸ್ವತಿಯ ಅನೇಕ ರೂಪಗಳೂ ಉಂಟು. ಮೇರು ತಂತ್ರಬು 7 ರೀತಿಯ ಸರಸ್ವತಿಯರನ್ನು ತಿಳಿಸುತ್ತದೆ. ಚಿಂತಾಮಣಿ ನೀಳಾ, ಘಟಾ, ಕಿಣಿ, ಅಂತರಿಕ್ಷಾ, ಜ್ಞಾನ, ಮಹಾ ಸರಸ್ವತಿ ಎಂದು.