ನ್ಯೂಸ್

ಕರೊನಾ ಲಸಿಕೆ ಅಭಿವೃದ್ಧಿಗೆ ಹರಸಾಹಸ: ಅಮೆರಿಕ, ಚೀನಾ, ಜರ್ಮನಿ ಸಹಿತ ಹಲವು ರಾಷ್ಟ್ರಗಳಿಂದ ಶ್ರಮ

ವಿಶ್ವದಾದ್ಯಂತ 18ಕ್ಕೂ ಹೆಚ್ಚು ಸಂಸ್ಥೆಗಳು ಮಹಾಮಾರಿ ಕರೊನಾ ಸೋಂಕಿಗೆ ಔಷಧ ಸಂಶೋಧನೆಯಲ್ಲಿ ತೊಡಗಿವೆ. ಅಮೆರಿಕ, ಚೀನಾ, ಜರ್ಮನಿ, ಕೆನಡಾ, ಬ್ರಿಟನ್, ಜರ್ಮನಿಗಳ ಸಂಶೋಧಕರು ಲಸಿಕೆಯ ಅಭಿವೃದ್ಧಿಗೆ ಯತ್ನಿಸುತ್ತಿದ್ದಾರೆ.

ಅಮೆರಿಕ, ಚೀನಾ ಈಗಾಗಲೇ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ಹೇಳಿಕೊಂಡಿವೆ. ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಮಾನವರ ಮೇಲೆ ಲಸಿಕೆಯ ಪ್ರಯೋಗವನ್ನು ಮೊದಲ ಹಂತದಲ್ಲಿ ಆರಂಭಿಸಿದ್ದು, ಇನ್ನೆರಡು ಹಂತಗಳನ್ನು ಪೂರೈಸಿ ಅನುಮೋದನೆ ಪಡೆಯಲು ಒಂದು ವರ್ಷ ಹಿಡಿಯಬಹುದು ಎನ್ನಲಾಗಿದೆ.

ಅಮೆರಿಕದ ಇನೊವಿಯೊ ಫಾರ್ವಸುಟಿಕಲ್ಸ್ ಮತ್ತು ಬೀಜಿಂಗ್​ನ ಅಡ್ವಾಕ್ಸೆೈ ಬಯೋಟೆಕ್ನಾಲಜಿಯು ‘ಇನೋ-4800’ ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಮಾನವರ ಮೇಲಿನ ಪ್ರಯೋಗದಲ್ಲಿ ಅಮೆರಿಕ, ಚೀನಾ ಮತ್ತು ದಕ್ಷಿಣ ಕೊರಿಯಾಗಳಲ್ಲಿ 3 ಸಾವಿರ ಲಸಿಕೆಯನ್ನು ಪೂರ್ಣಗೊಳಿಸಿದೆ. ಏಪ್ರಿಲ್​ನಲ್ಲಿ ಈ ಲಸಿಕೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಚೀನಾದ ಸೇನಾ ವೈದ್ಯ ವಿಜ್ಞಾನ ಅಕಾಡೆಮಿ ಈಗಾಗಲೇ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮುಗಿಸಿದ್ದು, ಮುಂದಿನ ಏಪ್ರಿಲ್​ನಲ್ಲಿ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಉಪ ಸಚಿವ ಕ್ಸು ನಾಂಪಿಂಗ್ ಹೇಳಿದ್ದಾರೆ. ಜರ್ಮನಿಯಲ್ಲೂ ಲಸಿಕೆ ಅಭಿವೃದ್ಧಿ ಹಂತದಲ್ಲಿದೆ. ಜೀವರಕ್ಷಕ ಲಸಿಕೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸಂಶೋಧಕರ ಉದ್ದೇಶವಾದರೂ, ಇದರ ಹಿಂದೆ ವಾಣಿಜ್ಯ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ಇರುವುದರಿಂದ ಪೇಟೆಂಟ್ ಪಡೆದು ಮೊದಲು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬ ಉಮೇದು ಸಂಶೋಧನಾ ಸಂಸ್ಥೆಗಳಲ್ಲಿ ಇದೆ. ಹೀಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆ, ಲಸಿಕೆಯ ಮೊದಲ ಉದ್ದೇಶ ಜೀವ ರಕ್ಷಣೆಯೇ ಹೊರತು ವಾಣಿಜ್ಯ ಮಾರುಕಟ್ಟೆ ಬಾಚಿಕೊಳ್ಳುವುದಲ್ಲ. ಸಂಶೋಧನಾ ಸಂಸ್ಥೆಗಳ ಮತ್ತು ಸಂಶೋಧಕರಿಂದ ಇಂಥ ಗುಣ ಅಪೇಕ್ಷಣೀಯ ಎಂದು ಹೇಳಿದೆ.

ಕ್ಲೋರೊಕ್ವಿನ್ ಬಳಸಲು ಟ್ರಂಪ್ ಸಲಹೆ

ಮಲೇರಿಯಾಕ್ಕೆ ಬಳಸುವ ಕ್ಲೋರೊಕ್ವಿನ್ ಔಷಧವನ್ನು ಕರೊನಾ ಪೀಡಿತರು ಬಳಸಲು ಅಡ್ಡಿ ಇಲ್ಲವೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ತಿಂಗಳ ಹಿಂದೆಯೇ ಘೋಷಿಸಿದ್ದರು. ಈ ಔಷಧವನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಕೂಡ ಅನುಮೋದಿಸಿದೆ.

ಚೀನಾದ ಫವಿಲವಿರ್

ಕರೊನಾಗೆ ಚೀನಾ ಮೊದಲು ಅನುಮೋದಿಸಿದ ಔಷಧ ‘ಫವಿಲವಿರ್’. ಕಡಿಮೆ ಅಡ್ಡ ಪರಿಣಾಮವಿದ್ದ ಈ ಔಷಧವನ್ನು ಚೀನಾದ ರಾಷ್ಟ್ರೀಯ ವೈದ್ಯೋತ್ಪನ್ನ ಆಡಳಿತ ಅಭಿವೃದ್ಧಿ ಪಡಿಸಿದ್ದು, ಶೆನ್ಜೆನ್ ಮತ್ತು ಗುವಾಂಗ್​ಡಾಂಗ್ ಪ್ರಾಂತ್ಯದಲ್ಲಿ 70 ಜನರ ಮೇಲೆ ಇದನ್ನು ಮೊದಲ ಪ್ರಯೋಗ ಮಾಡಲಾಯಿತು.

69 ಔಷಧಗಳ ಶಿಫಾರಸು

ಕರೊನಾ ಸೋಂಕಿಗೆ 69 ಔಷಧ ಸಂಯುಕ್ತಗಳನ್ನು ಸಂಶೋಧಕರ ತಂಡ ಶಿಫಾರಸು ಮಾಡಿದೆ. ಈ ಔಷಧಗಳು ಈಗಾಗಲೇ ಬಳಕೆಯಲ್ಲಿರುವ ಔಷಧಗಳಾಗಿದ್ದು, ಇವುಗಳಿಂದ ಸೋಂಕಿಗೆ ಸಂಪೂರ್ಣ ಕಡಿವಾಣ ಹಾಕಲು ಆಗದಿದ್ದರೂ, ಒಂದು ಹಂತದವರೆಗೆ ತಡೆಯಬಹುದು ಎಂದು ಹೇಳಿದ್ದಾರೆ. ಈ ಔಷಧಗಳನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಅನುಮೋದಿಸಿದೆ ಎಂದು ತಿಳಿಸಿದ್ದಾರೆ.

ಶಿಫಾರಸು ಮಾಡಲಾದ ಔಷಧ ಸಂಯುಕ್ತಗಳ ಪಟ್ಟಿ ಬಯೋರ್ಕ್ಸಿವ್ ವೆಬ್​ಸೈಟನ್​ನಲ್ಲಿ ಪ್ರಕಟವಾಗಿದೆ. ಕರೊನಾ ಸೋಂಕಿಗೆ ಪರಿಣಾಮಕಾರಿ ಔಷಧ ತಯಾರಿಸಲು ಅವಿರತವಾಗಿ ಶ್ರಮಿಸುತ್ತಿರುವ ನೂರಾರು ಸಂಶೋಧಕರ ತಂಡ, ಗಂಟಲು ಸೋಂಕಿಗೆ ಕಾರಣವಾದ‘ಕರೊನಾ ಸಾರ್ಸ್-ಕೋವ್-2’ ವೈರಾಣುವಿನ ವಂಶಾವಳಿಯನ್ನು ಅಧ್ಯಯನ ಮಾಡಿದ್ದು, ಈ ವೈರಾಣುವಿನಲ್ಲಿ ಸೋಂಕಿನ ಪ್ರೋಟೀನ್ ಉತ್ಪಾದಿಸುವ ಗುಣವಿದೆ. ಇದರಿಂದ ಲಕ್ಷಾಂತರ ಹೊಸ ವೈರಾಣುಗಳು ಉತ್ಪತ್ತಿಯಾಗುತ್ತವೆ. ಇವು ಮನುಷ್ಯ ದೇಹದಲ್ಲಿ ಪ್ರೋಟೀನ್​ಗೆ ಸೇರದಂತೆ ತಡೆಹಾಕುವ 24 ಔಷಧಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಔಷಧಗಳು ಕ್ಯಾನ್ಸರ್, ರ್ಪಾನ್ಸನ್, ರಕ್ತದೊತ್ತಡ ನಿಯಂತ್ರಣಕ್ಕೆ ಬಳಸುವಂತಹ ಔಷಧವೇ ಆಗಿವೆ. ಜತೆಗೆ ಕೆಲವು ಆಂಟಿಬಯೊಟಿಕ್​ಗಳು ಇವೆ. ಆದರೆ, ಇವುಗಳ ಬಳಕೆಯಿಂದ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಕೂಡ ಇದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಚಿಕಿತ್ಸೆಗೆ ಸಜ್ಜಾಗಿರಿ

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸಲಹೆಗಳನ್ನು ನೀಡಿದೆ. ಕರೊನಾ ವಿರುದ್ಧ ಹೋರಾಡಲು ಸಂಪೂರ್ಣವಾಗಿ ಸಜ್ಜಾಗುವಂತೆ ತಿಳಿಸಲಾಗಿದೆ.

  • ಅನಿವಾರ್ಯವಲ್ಲದ ಶಸ್ತ್ರಚಿಕಿತ್ಸೆಗಳ ಮುಂದೂಡಿಕೆ
  • ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್ ಸೌಲಭ್ಯ
  • ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ತರಬೇತಿ
  • ವೆಂಟಿಲೇಟರ್, ಅಗತ್ಯ ಉಪಕರಣಗಳ ಸಂಗ್ರಹಣೆ
  • ಒಳರೋಗಿಗಳ ಶೀಘ್ರ ಬಿಡುಗಡೆ, ಹೊಸ ದಾಖಲಾತಿಗೆ ಕಡಿವಾಣ
  • ರೋಗಿಗಳ ಪರಿಚಾರಕರ ಸಂಖ್ಯೆ ಒಂದನ್ನು ಮೀರಬಾರದು
  • ಶಂಕಿತ ರೋಗಿಗಳಿಗೆ ಸೂಕ್ತ ಮಾಹಿತಿ
  • ಅನಿವಾರ್ಯವಲ್ಲದ ಲೆಕ್ಕ ಪರಿಶೋಧನೆ ಮುಂದೂಡಿಕೆ
  • ರೋಗಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಉಚಿತ ಚಿಕಿತ್ಸೆ
  • ಶಂಕಿತರು ಆಸ್ಪತ್ರೆಯಲ್ಲೇ ಇರಬೇಕು. ಎನ್​ಸಿಡಿಸಿ ಅಥವಾ ಐಡಿಎಸ್​ಪಿಗೆ ಮಾಹಿತಿ ನೀಡುವುದು ಕಡ್ಡಾಯ
  • ನ್ಯುಮೋನಿಯಾ ರೋಗಿಗಳ ಮಾಹಿತಿಯನ್ನು ಎನ್​ಸಿಡಿಸಿ ಅಥವಾ ಐಡಿಎಸ್​ಪಿಗೆ ನೀಡಬೇಕು
  • ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪರೀಕ್ಷೆ, ಮೌಲ್ಯಮಾಪನ ಮುಂದೂಡಿಕೆ
  • ಶಿಕ್ಷಣ ಸಂಸ್ಥೆ, ಪರೀಕ್ಷಾ ಮಂಡಳಿ, ವಿದ್ಯಾರ್ಥಿ, ಶಿಕ್ಷಕರ ನಡುವೆ ನಿಯಮಿತ ಸಂಪರ್ಕ
  • ಆಸ್ಪತ್ರೆ ಸುತ್ತ ಮೆಡಿಕಲ್ ಹೊರೆತು ಬೇರಾವ ಅಂಗಡಿಯನ್ನು ತೆರೆಯುವಂತಿಲ್ಲ
  • ತುರ್ತ, ಅನಿವಾರ್ಯ ರಜೆಯನ್ನು ಹೊರೆತುಪಡಿಸಿ ಬೇರೆಲ್ಲಾ ರಜೆ ರದ್ದು
  • ಒಡಿಪಿಯಲ್ಲಿ ಜ್ವರದಂತಹ ರೋಗಲಕ್ಷಣಗಳಿರುವ ರೋಗಿಗಳಿಗೆ ಪ್ರತ್ಯೇಕ ತಪಾಸಣೆ
  • ದೀರ್ಘಕಾಲದ ರೋಗಿ ಮತ್ತು ಸಣ್ಣ ಕಾಯಿಲೆಗಳಿಗೆ ಪ್ರಾರ್ಥಮಿಕ/ ದ್ವಿತೀಯ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ

ಕರೊನಾ ವೈರಸ್​ಗೆ ನಿರ್ದಿಷ್ಟ ಔಷಧ ಇಲ್ಲ. ಇದಕ್ಕೆ ರೋಗ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ. ಇದರ ಪ್ರಮುಖ ಲಕ್ಷಣಗಳು ನೆಗಡಿ, ಕೆಮ್ಮು, ಶೀತವಾಗಿದ್ದು, ಇವು ಸಾಮಾನ್ಯವಾಗಿ ಬಂದರು ನಾಲ್ಕರಿಂದ ಐದು ದಿನಗಳವರೆಗೆ ಇರುತ್ತದೆ. ಅದೇ ರೀತಿ ಕರೊನಾವೈರಸ್ ಸಹ. ಸೋಂಕಿತರಿಗೆ ವಿಶ್ರಾಂತಿ ಅತ್ಯಗತ್ಯ. ಯಾರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೊ ಅಂತಹವರು ಗುಣಹೊಂದುತ್ತಾರೆ. ಇಲ್ಲದವರಿಗೆ ಸಮಸ್ಯೆ ಹೆಚ್ಚಾಗುತ್ತದೆ. ಅದನ್ನು ನಿಯಂತ್ರಿಸಲು ಆಂಟಿ ಬಯೊಟೆಕ್, ಐವಿ ಫೋ›ಯಿಡ್ ನೀಡಲಾಗುವುದು. ಈ ವೇಳೆ ಸೋಂಕಿತರಿಗೆ ಜ್ವರ ಬಂದರೆ ಪ್ಯಾರಾಸಿಟಮಾಲ್ ಮಾತ್ರೆ ನೀಡಲಾಗುವುದು. ಕೇವಲ ಸಿಂಪ್ಟಮ್ಯಾಟಿಕ್ ಟ್ರೀಟ್ಮೆಂಟ್ ನೀಡಲಾಗುವುದು. ಬ್ಯಾಕ್ಟೀರಿಯಾ ಕಡಿಮೆಯಾದರೆ ನಂತರ ರೋಗಿ ಚೇತರಿಸಿಕೊಳ್ಳುತ್ತಾರೆ.

| ರಾಜೀವ್ ಗಾಂಧಿ ಎದೆರೋಗಿಗಳ ಆಸ್ಪತ್ರೆ ವೈದ್ಯರು