ಜಾಮ್ನಗರ: 2000ನೇ ಇಸವಿಯಲ್ಲಿ ಅಳಿವಿನಂಚಿನಲ್ಲಿ ಇರುವಂಥ ಪಕ್ಷಿ ಎಂದು ಘೋಷಿಸಲಾದ ಸ್ಪಿಕ್ಸ್ ಮಕಾವ್ಸ್ ಗೆ ಸಂಬಂಧಿಸಿದಂತೆ ಮಹತ್ವವಾದ ಕಾರ್ಯಕ್ರಮವೊಂದನ್ನು ‘ವಂತಾರಾ’ದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂಥ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರೀಹ್ಯಾಬಿಲಿಟೇಷನ್ ಸೆಂಟರ್ ಹಮ್ಮಿಕೊಂಡಿದ್ದು, ಇದಕ್ಕೆ ಅಸೋಸಿಯೇಷನ್ ಫಾರ್ ದ ಕನ್ಸರ್ವೇಷನ್ ಆಫ್ ಥ್ರೆಟನ್ಡ್ ಪ್ಯಾರಟ್ಸ್ (ಎಸಿಟಿಪಿ) ಜೊತೆಗೆ ಸಹಯೋಗ ಮಾಡಿಕೊಂಡಿದೆ. ಈ ಪ್ರಯತ್ನದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ ಬುಧವಾರದಂದು ನಲವತ್ತೊಂದು ಸ್ಪಿಕ್ಸ್ ಮಕಾವ್ ಗಳನ್ನು ಜರ್ಮನಿಯ ಬರ್ಲಿನ್ ನಲ್ಲಿ ಇರುವ ಎಸಿಟಿಪಿಯ ಸಾಕಾಣಿಕೆ ಕೇಂದ್ರದಲ್ಲಿ ಬ್ರೆಜಿಲ್ ನ ಬಹಿಯಾದಲ್ಲಿ ಇರುವ ಬಿಡುಗಡೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಂದಹಾಗೆ ಹಾಲಿವುಡ್ ಸಿನಿಮಾ ‘ರಿಯೋ’ದಲ್ಲಿ ಈ ಮಕಾವ್ ಪಕ್ಷಿಗಳನ್ನು ಕಾಣಬಹುದಾಗಿದೆ.
ಜಾಗತಿಕ ಪುನರ್ ಪರಿಚಯದ ಭಾಗವಾಗಿ ವಂತಾರದಿಂದ ಎಸಿಟಿಪಿಗೆ ಮಾರ್ಗದರ್ಶನ ಮತ್ತು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿಕೊಡಲಾಗುತ್ತಿದೆ. ಈ ನಲವತ್ತೊಂದು ಮಕಾವ್ ಗಳ ಆಯ್ಕೆಗೆ ಅವುಗಳ ವಂಶವಾಹಿ, ಆರೋಗ್ಯವನ್ನು ಮಾನದಂಡವಾಗಿ ತೆಗೆದುಕೊಳ್ಳಲಾಗಿದೆ. ಈ ಗುಂಪಿನಲ್ಲಿ ಇಪ್ಪತ್ಮೂರು ಹೆಣ್ಣು, ಹದಿನೈದು ಗಂಡು, ಹಾಗೂ ಇನ್ನೂ ಸಂತಾನೋತ್ಪತ್ತಿ ಆರಂಭಿಸದ ಮರಿಗಳು ಸೇರಿವೆ. ಸ್ಥಳಾಂತರಕ್ಕೂ ಮುಂಚಿತವಾಗಿ ಈ ಪಕ್ಷಿಗಳನ್ನು ಇಪ್ಪತ್ತೆಂಟು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಆ ನಂತರ ಚಾರ್ಟರ್ಡ್ ವಿಮಾನದಲ್ಲಿ ಇವುಗಳನ್ನು ಬರ್ಲಿನ್ ನಿಂದ ಬ್ರೆಜಿಲ್ ನ ಪೆಟ್ರೋಲಿನಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಎಸಿಟಿಪಿಯ ಇಬ್ಬರು ಪ್ರಾಣಿ ವೈದ್ಯರು, ಒಬ್ಬ ಪ್ರತಿನಿಧಿಗೆ ವಂತಾರಾದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರೀಹ್ಯಾಬಿಲಿಟೇಷನ್ ಸೆಂಟರ್ ಗೆ ಸೇರಿದ ಪರಿಣತರ ತಂಡವು ನೆರವು ನೀಡಿತು.
ಎಸಿಟಿಪಿ ಸ್ಥಾಪಕ ಮಾರ್ಟಿನ್ ಗುತ್ ಅವರು ಮಾತನಾಡಿ, “ಎಸಿಟಿಪಿ ಪರವಾಗಿ ಅನಂತ್ ಅಂಬಾನಿ ಹಾಗೂ ವಂತಾರಾಗೆ ಹೃದಯಪೂರ್ವಕ ವಂದನೆಗಳು ಸಲ್ಲಿಸುತ್ತೇವೆ. ಈ ಮಕಾವ್ ಪುನರ್ ಪರಿಚಯ ಯೋಜನೆಯಲ್ಲಿ ಅವರ ನೆರವು ಅಪೂರ್ವವಾದದ್ದು. ತುಂಬ ಉದಾರವಾದ ಹಣಕಾಸಿನ ನೆರವಿನ ಜೊತೆಗೆ ಈ ಪಕ್ಷಿಗಳ ಸಂತತಿ ವೃದ್ಧಿಗಾಗಿ ವಂತಾರದ ಪರಿಣತರ ನೆರವನ್ನು ಸಹ ದೊರಕಿಸಿಕೊಟ್ಟಿರುವುದಕ್ಕೆ ಬೆಲೆಯೇ ಕಟ್ಟುವುದಕ್ಕೆ ಸಾಧ್ಯವಿಲ್ಲ. ಭವಿಷ್ಯದಕಲ್ಲಿ ಇದೇ ರೀತಿ ವಂತಾರಾದ ಸಹಯೋಗದಲ್ಲಿ ಅಳಿವಂಚಿನಲ್ಲಿ ಇರುವ ಇನ್ನೂ ಹಲವು ವನ್ಯಜೀವಿಗಳ ರಕ್ಷಣೆ ಮಾಡುವುದನ್ನು ನಾವು ಎದುರು ನೋಡುತ್ತೇವೆ,” ಎಂದಿದ್ದಾರೆ.
ಕೇಂದ್ರೀಕೃತ ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ ಭಾರತದ ವೈವಿಧ್ಯಮಯ ವನ್ಯಜೀವಿ ಪರಂಪರೆಯನ್ನು ಪುನಃಸ್ಥಾಪನೆಗೆ ವಂತಾರಾ ಗಮನಾರ್ಹವಾದ ಪ್ರಯತ್ನಗಳನ್ನು ಮಾಡುತ್ತಿದೆ. ಈ ಉಪಕ್ರಮದ ಅಡಿಯಲ್ಲಿ ಸೆರೆಯಲ್ಲಿಟ್ಟು ಬೆಳೆಸಿದಂಥ ಖಡ್ಗಮೃಗಗಳನ್ನು ಸುರಕ್ಷಿತ ಆವಾಸಸ್ಥಾನಗಳಲ್ಲಿ ಪುನಃ ಪರಿಚಯಿಸುವುದು, ಸಂತಾನೋತ್ಪತ್ತಿ ಮತ್ತು ಆವಾಸಸ್ಥಾನ ಪುನಃಸ್ಥಾಪನೆಯ ಮೂಲಕ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆಯನ್ನು ಬಲಪಡಿಸುವುದು ಮತ್ತು ಯಶಸ್ವಿ ಸಂತಾನೋತ್ಪತ್ತಿ ಕಾರ್ಯಕ್ರಮದ ನಂತರ ಚಿರತೆಗಳನ್ನು ಭಾರತೀಯ ಕಾಡುಗಳಿಗೆ ಮರಳಿಸುವುದು ಸೇರಿವೆ. ಸ್ಪಿಕ್ಸ್ ಮಕಾವ್‌ನ ಮರುಪರಿಚಯ ಜಾಗತಿಕ ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಸಾಧನೆಯನ್ನು ಗುರುತಿಸುವ ಮೂಲಕ ಜೀವಿಗಳ ಸಂಖ್ಯೆಯಲ್ಲಿ ಸುಧಾರಣೆ ಮತ್ತು ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಗೆ ವಂತಾರಾದ ಬದ್ಧತೆಯನ್ನು ಒತ್ತಿಹೇಳುತ್ತದೆ.