ನವದೆಹಲಿ: ಉದಯಪುರ ಮತ್ತು ಆಗ್ರಾ ನಡುವೆ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೇ ನೌಕರರ ಗುಂಪೊಂದು ನುಗ್ಗಿ ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಾದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಉದಯಪುರ ಮತ್ತು ಆಗ್ರಾ ನಡುವೆ ಸೆಪ್ಟೆಂಬರ್ 2 ರಂದು ಪರಿಚಯಿಸಲಾದ ರೈಲು ವಿವಾದದ ಕೇಂದ್ರವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆ ಬಗ್ಗೆ ವಿವಾದ ಪ್ರಾರಂಭವಾಗಿದ್ದು, ವಿವಿಧ ವಿಭಾಗಗಳಿಗೆ ಸೇರಿದ ನೌಕರರು ಸಿಟ್ಟಿಗೆದ್ದಿದ್ದರು. ಇದನ್ನು ಚಾಲಕ, ಗಾರ್ಡ್ಗಳನ್ನು ಪ್ರಶ್ನಿಸಲು ಬಂದಾಗ ಅವರು ಬಾಗಿಲುಗಳನ್ನು ಬಂದ್ ಮಾಡಿಕೊಂಡಿದ್ದರು. ಆಗ ವಾಗ್ವಾದವಾಗಿ ಬಲವಂತವಾಗಿ ಬಾಗಿಲು ಮುರಿದು ಒಳನುಗ್ಗಿದ ನೌಕರರು ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಗಾರ್ಡ್ ರೂಮಿನ ಡೋರ್ ಲಾಕ್ ಗೆ ಹಾನಿ ಮಾಡಿ ಕ್ಯಾಬಿನ್ ನಲ್ಲಿದ್ದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಈ ಸಂದರ್ಭದಲ್ಲಿ ಲೋಕೊ ಪೈಲಟ್‌ಗೆ ಗಾಯವಾಗಿದೆ.
ವಿವಾದ ಬಿಗಡಾಯಿಸಿದ ಕಾರಣ ಇದೀಗ ಈ ಸಮಸ್ಯೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗಿದೆ. ರೈಲು-ಪಶ್ಚಿಮ ಸೆಂಟ್ರಲ್ ರೈಲ್ವೆ, ವಾಯುವ್ಯ ರೈಲ್ವೆ ಮತ್ತು ಉತ್ತರ ರೈಲ್ವೆ-ನಿರ್ವಹಣೆಯಲ್ಲಿ ತೊಡಗಿರುವ ವಿವಿಧ ರೈಲ್ವೆ ವಿಭಾಗಗಳ ನಡುವಿನ ಸಂಘರ್ಷವು ಸುಗಮ ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಆಂತರಿಕ ಸಂಘರ್ಷಗಳಿಂದಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಲವು ಬಾರಿ ವಿಳಂಬವಾಗಿದೆ ಎಂದು ವರದಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿದ್ದು, ರೈಲ್ವೇ ಅಧಿಕಾರಿಗಳು ದಾಂಧಲೆ ನಡೆಸಿದವರ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.