ನ್ಯೂಸ್

12 ವರ್ಷದ ಮಕ್ಕಳಿಗೂ ಲಸಿಕೆ; ನಾಳೆಯಿಂದ ದೇಶಾದ್ಯಂತ ಕಾರ್ಬೆವ್ಯಾಕ್ಸ್ ನೀಡಿಕೆ ಆರಂಭ

ಬೆಂಗಳೂರು: ಕೋವಿಡ್ ಮೂರನೇ ಅಲೆ ಇಳಿಕೆಯಾಗಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮಾ. 16ರಿಂದ ದೇಶಾದ್ಯಂತ 12ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ವೈಜ್ಞಾನಿಕ ಸಂಸ್ಥೆಗಳು, ತಜ್ಞರ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ನಡೆಯುತ್ತಿರುವ ಕೋವಿಡ್ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ 14 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

10.20 ಕೋಟಿ ಡೋಸ್: ರಾಜ್ಯದಲ್ಲಿ ಈವರೆಗೂ 5,22,02,086 ಮಂದಿಗೆ ಮೊದಲ ಡೋಸ್, 4,85,95,407 ಮಂದಿಗೆ ಎರಡನೇ ಡೋಸ್, 12,71,556 ಮಂದಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ.

24 ಲಕ್ಷ ಮಕ್ಕಳಿಗೆ ಮೊದಲ ಡೋಸ್: ರಾಜ್ಯದಲ್ಲಿ 15-17 ವರ್ಷದ 24,48,405 ಮಕ್ಕಳಿಗೆ ಮೊದಲ ಡೋಸ್ ಲಸಿಕೆ ವಿತರಿಸಲಾಗಿದ್ದು, 18,88,653 ಮಕ್ಕಳು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಈ ವಯೋಮಾನದ ಎಲ್ಲ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. 7,60,490 ಮಂದಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.

60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ: ಸದ್ಯ ಆರೋಗ್ಯ ಸಮಸ್ಯೆ ಹೊಂದಿದ್ದ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮುನ್ನೆಚ್ಚರಿಕೆ ಡೋಸ್ ವಿತರಿಸಲಾಗುತ್ತಿತ್ತು. ಇದೀಗ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ ವಿಸ್ತರಿಸಲಾಗಿದೆ.