ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಎದುರು ಲಸಿಕೆ ಲಭ್ಯತೆ ಕುರಿತು ಮಾಹಿತಿ ಕೇಳುತ್ತಿರುವುದು. 
ನ್ಯೂಸ್

ಲಸಿಕೆ ಸಿಗದೆ ಹಾಹಾಕಾರ: ಜೀವ ಉಳಿಸುವ ವ್ಯಾಕ್ಸಿನ್ ಕೊರತೆ, ಇಕ್ಕಟ್ಟಿನಲ್ಲಿ ಸರ್ಕಾರ..

ಬೆಂಗಳೂರು: ಆಮ್ಲಜನಕ ಕೊರತೆ, ರೆಮ್ೆಸಿವಿರ್ ಔಷಧ ಬೇಡಿಕೆ, ಬೆಡ್ ಸಮಸ್ಯೆ ಇತ್ಯರ್ಥಪಡಿಸುವಲ್ಲೇ ಹೈರಾಣಾಗಿರುವ ರಾಜ್ಯ ಸರ್ಕಾರಕ್ಕೀಗ ಲಸಿಕೆ ಸಂಕಷ್ಟ ಎದುರಾಗಿದೆ. ಕರೊನಾ ನಿರೋಧಕ ಲಸಿಕೆ ಸರಬರಾಜಿನಲ್ಲಿ ಕರ್ನಾಟಕಕ್ಕೆ ನಿರೀಕ್ಷಿತ ವೇಗದಲ್ಲಿ ಸಹಕಾರ ಸಿಗದ ಪರಿಣಾಮ ನಾಡಿನುದ್ದಕ್ಕೂ ಗೊಂದಲ, ಆತಂಕ ಸೃಷ್ಟಿಯಾಗಿದೆ. ಈ ಸಮಸ್ಯೆ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದರೆ, ಲಸಿಕೆಗಾಗಿ ನಗರ ಪ್ರದೇಶಗಳ ಜನತೆ ಹಳ್ಳಿಸೇರುತ್ತಿದ್ದಾರೆ. ಇನ್ನು ಲಸಿಕೆ ಕೇಂದ್ರಗಳೇ ಕರೊನಾ ಹಾಟ್​ಸ್ಪಾಟ್ ಆಗಿ ರೂಪುಗೊಳ್ಳುತ್ತಿ ರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕರೊನಾ ವಿರುದ್ಧ ಗೆಲ್ಲಲು ಲಸಿಕೆಯೊಂದೇ ಭರವಸೆ ಎಂಬ ತೀರ್ವನಕ್ಕೆ ಬಂದಿರುವ ಜನತೆ ವ್ಯಾಕ್ಸಿನ್​ಗಾಗಿ ಮುಗಿ ಬೀಳುತ್ತಿದ್ದಾರೆ. ಜನರ ಈ ಆತುರ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಿದೆ. ದೇಶಾದ್ಯಂತ 18ರಿಂದ 44 ವರ್ಷದವರಿಗೆ ಲಸಿಕೆ ವಿತರಿಸುವ ಅಭಿಯಾನಕ್ಕೆ ಮೇ 1ರಂದೇ ಚಾಲನೆ ಸಿಕ್ಕಿದೆ. ಆದರೆ, ರಾಜ್ಯದ ಒಟ್ಟು ಬೇಡಿಕೆಯ ಗುಲಗಂಜಿ ಗಾತ್ರದಷ್ಟೂ ಲಸಿಕೆ ಪೂರೈಕೆಯಾಗಿಲ್ಲ. ಈ ವಿಷಯ ಪ್ರತಿಪಕ್ಷದ ಟೀಕೆಗೆ ಆಹಾರವಾಗಿದೆಯಲ್ಲದೇ ಜನರ ಅಸಹನೆಗೂ ಎಡೆಮಾಡಿಕೊಟ್ಟಿದೆ. ಈ ನಡುವೆ, ಕೇಂದ್ರ ಸರ್ಕಾರದ ಪ್ರಮುಖ ಖಾತೆ ನಿಭಾಯಿಸುತ್ತಿರುವ ಪ್ರಲ್ಹಾದ ಜೋಷಿ ಹಾಗೂ ಸದಾನಂದ ಗೌಡರ ಪ್ರಯತ್ನವೂ ಸಾಕಾಗುತ್ತಿಲ್ಲ, ಇಂಥ ಹೊತ್ತಿನಲ್ಲೂ ನಾಡಿನ ಜನರ ಒಳಿತಿಗಾಗಿ ‘ಲಾಬಿ’ ಮಾಡದಿರುವ ಕುರಿತು ಆಡಳಿತ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದೆ.

ಇನ್ನು ರಾಜ್ಯಾದ್ಯಂತ ಲಸಿಕಾ ಕೇಂದ್ರಗಳಲ್ಲಿ ನೂಕುನುಗ್ಗಲು ಏರ್ಪಡುತ್ತಿರುವುದರಿಂದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಲಸಿಕಾ ಕೇಂದ್ರಗಳೇ ಕರೊನಾ ಹಾಟ್​ಸ್ಪಾಟ್ ಆಗಿ ರೂಪುಗೊಳ್ಳುತ್ತಿವೆ. ಲಸಿಕೆ ಲಭ್ಯತೆ ಕೊರತೆ ಹಿನ್ನೆಲೆಯಲ್ಲಿ ಅಭಿಯಾನವನ್ನು ಮೇ 14ರವರೆಗೆ ಮುಂದೂಡುವ ಆರೋಗ್ಯ ಇಲಾಖೆಯ ಪ್ರಸ್ತಾವನೆಗೆ ಸಹಮತ ವ್ಯಕ್ತವಾಗಿರಲಿಲ್ಲ. ಕಡಿಮೆ ಸಂಖ್ಯೆಯ ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಮುಂದುವರಿದಿದೆ. ಲಸಿಕೆ ಸ್ವೀಕರಿಸಲು ನೋಂದಣಿಯಾಗಿ ಸಮಯ ನಿಗದಿಯಾದ ಎಸ್​ಎಂಎಸ್ ಸಂದೇಶ ಇದ್ದವರಿಗೆ ಮಾತ್ರ ಅವಕಾಶ ಎಂದು ಆರೋಗ್ಯ ಇಲಾಖೆ ಹೇಳಿದೆ. ಇಷ್ಟಾದರೂ ಜನರು ಲಸಿಕಾ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಯುವ ಜನತೆಗೆ ಲಸಿಕೆ ನೀಡುವ ವಿಚಾರದಲ್ಲೂ ಭೀಕರ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಗುಜರಾತ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳ ಯುವಕರಿಗೆ ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬೆರಣಿಕೆಯಷ್ಟು ಜನರಿಗೆ ಮಾತ್ರ ನೀಡಲಾಗಿದೆ ಎಂದು ದೂರಿದ್ದಾರೆ. ಮಹಾರಾಷ್ಟ್ರದಂತೆ ಕರ್ನಾಟಕವೂ ಲಸಿಕೆಯನ್ನು ತನ್ನ ಅಧೀನದಲ್ಲಿರುವ ಕಂಪನಿಗಳ ಮೂಲಕ ಉತ್ಪಾದನೆ ಮಾಡಿಸಲು ಕಾರ್ಯೋನ್ಮುಖವಾಗ ಬೇಕೆಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೊರತೆ ನೀಗಿಸಲು ಕ್ರಮವೇನು?: ಎರಡು ಕೋಟಿ ಕೋವಿಡ್ ಲಸಿಕೆಯನ್ನು ಜಾಗತಿಕ ಟೆಂಡರ್ ಮೂಲಕ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ ಈಗಾಗಲೇ 3 ಕೋಟಿ ವ್ಯಾಕ್ಸಿನ್ ಖರೀದಿಸುವ ಸಂಬಂಧ ಕಂಪನಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್, 2 ಕೋಟಿ ಕೋವಿಶೀಲ್ಡ್ ಲಸಿಕೆ ಸೇರಿದೆ. ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಾಗತಿಕ ಟೆಂಡರ್ ಕರೆಯುವ ಬಗ್ಗೆ ನಿರ್ಣಯಿಸಲಾಗಿದೆ.

ರಾಜ್ಯದಲ್ಲಿ ವ್ಯಾಕ್ಸಿನ್ ಸ್ಥಿತಿಗತಿ

  • ಈವರೆಗೆ ಎರಡೂ ಡೋಸ್ ಲಸಿಕೆ ಪಡೆದವರು- 17.77 ಲಕ್ಷ, ಲಸಿಕೆ ಪಡೆಯಬೇಕಾದ 18-44 ವಯೋಮಾನದವರು (ಅಂದಾಜು)- 4.38 ಕೋಟಿ
  • ರಾಜ್ಯದಲ್ಲಿ 6.85 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್, ಎರಡನೇ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರು 4.39 ಲಕ್ಷ.
  • 4.40 ಲಕ್ಷ ಫ್ರಂಟ್​ಲೈನ್ ವಾರಿಯರ್​ಗಳು ಮೊದಲ ಡೋಸ್ ಪಡೆದಿದ್ದಾರೆ, ಎರಡನೇ ಡೋಸ್ ಪಡೆದ ಫ್ರಂಟ್​ಲೈನ್ ವಾರಿಯರ್ಸ್ 1.67 ಲಕ್ಷ
  • 60 ವರ್ಷ ತುಂಬಿದವರಲ್ಲಿ 8.41 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಗಿದೆ, 44-59 ವಯೋಮಾನದ 3.29 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಗಿದೆ.

ಲಸಿಕಾ ಕೇಂದ್ರಗಳ ಮುಂದೆ ರಾತೋರಾತ್ರಿ ಸರದಿ ಸಾಲಿನಲ್ಲಿ ನಿಲ್ಲುವುದು ಸಲ್ಲದು. ಹಂತ ಹಂತವಾಗಿ ಲಸಿಕೆ ಪೂರೈಕೆಯಾಗುತ್ತಿದ್ದು, ಲಭ್ಯತೆ ಪ್ರಮಾಣಕ್ಕನುಸಾರ ವಿತರಿಸಲಾಗುತ್ತಿದೆ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ನಾನು ನನ್ನ ಮಕ್ಕಳಿಗೆ ನೋಂದಣಿ ಮಾಡಿಸಲು ಆನ್ಲೈನ್​ನಲ್ಲಿ ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ನೀವು ಬೇಕಾದರೆ ಪ್ರಯತ್ನಿಸಿ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ