uttarpradesh incident 
ನ್ಯೂಸ್

ಅಪರಿಚಿತನೊಂದಿಗೆ ಫೇಸ್​ಬುಕ್​​ನಲ್ಲಿ ಸ್ನೇಹ; ವಿವಾಹಿತ ದಲಿತ ಮಹಿಳೆಗೆ ಕಾದಿತ್ತು ಆಪತ್ತು!

ಉತ್ತರಪ್ರದೇಶ: ವಿವಾಹಿತ ದಲಿತ ಮಹಿಳೆಯೊಂದಿಗೆ ಫೇಸ್​ಬುಕ್​​ನಲ್ಲಿ ಸ್ನೇಹ ಬೆಳೆಸಿ, ಆಕೆಯನ್ನು ಮದುವೆಯಾಗಿ ನಂತರ ಮತಾಂತರಗೊಳಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಮಿಶ್ರೌಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಧಾರ್ಮಿಕ ಮತಾಂತರದ ಪ್ರಕರಣ ಮುನ್ನೆಲೆಗೆ ಬಂದಿದೆ. ದಲಿತ ಕುಟುಂಬಕ್ಕೆ ಸೇರಿದ ಮಹಿಳೆಯೊಂದಿಗೆ ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ, ಆಕೆಯನ್ನು ಮದುವೆಯಾಗಿ ತದನಂತರ ಇಸ್ಲಾಂಗೆ ಮತಾಂತರಗೊಳಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಸದ್ಯ ಆರೋಪಿಯೊಟ್ಟಿಗೆ 5 ಜನರನ್ನು ಬಂಧಿಸಿರುವ ಪೊಲೀಸರು, ಐಪಿಸಿ ಸೆಕ್ಷನ್ 504 ಮತ್ತು 506, ಎಸ್‌ಸಿ / ಎಸ್‌ಟಿ ಕಾಯ್ದೆ ಮತ್ತು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯ ಮೊದಲ ಪತಿ ಶೈಲೇಶ್ ಕುಮಾರ್ ಮತ್ತು ಅವರ ಕುಟುಂಬದವರು ನೀಡಿದ ದೂರಿನ ಅನ್ವಯ ಪೊಲೀಸರು ಚುರುಕು ತನಿಖೆ ಕೈಗೊಂಡಿದ್ದಾರೆ. ಈ ವರ್ಷದ ಮೇ 31ರ ರಾತ್ರಿ ಮಹಿಳೆ ಮನೆಯಿಂದ ಓಡಿ ಹೋಗಿದ್ದಾಳೆ. ಓಡಿ ಹೋಗುವ ಮುನ್ನ ಮನೆಯಲ್ಲಿದ್ದ 55,000 ರೂ. ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಘಟನೆ ನಡೆದು ಎರಡು ದಿನಗಳ ಬಳಿಕ ಮಾಹಿತಿ ಕಲೆಹಾಕಿದ ಪೊಲೀಸರು, ಜಿಲ್ಲೆಯ ಸಿಸ್ವಾನ್ ಗ್ರಾಮದ ಸಜಾವುಲ್ಲಾ ಎಂಬಾತ ಶೈಲೇಶ್ ಪತ್ನಿಯೊಂದಿಗೆ ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿ, ತನ್ನ ಸಹಚರರೊಂದಿಗೆ ಮುಂಬೈಗೆ ಕರೆದೊಯ್ದಿದ್ದ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ. ಮುಂಬೈನಲ್ಲಿ ಆತ ಧಾರ್ಮಿಕ ಮತಾಂತರವನ್ನು ನಡೆಸಿದ್ದಾನೆ ಮತ್ತು ಮಹಿಳೆಯ ಹೆಸರನ್ನು ಲಕ್ಷ್ಮಿಯಿಂದ ಮುಸ್ಕಾನ್ ಎಂದು ಬದಲಾಯಿಸಿದ್ದಾನೆ.

ಯುವತಿಯ ಸಂಬಂಧಿಕರು ಮುಂಬೈ ತಲುಪಿ, ಎರಡೂ ಕಡೆಯವರಿಗೆ ಸಮಾಲೋಚನೆ ನಡೆಸಿದ ಬಳಿಕ ಆಕೆಯನ್ನು ತಮ್ಮ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).