ನ್ಯೂಸ್

ಕರೊನಾ ಸೋಂಕಿನ ಭೀತಿ: ಮುಖ್ಯಮಂತ್ರಿ ಹಾಗೂ ಸಚಿವರು ಕ್ವಾರಂಟೈನ್​ಗೆ

ಡೆಹ್ರಾಡೂನ್ (ಉತ್ತರಾಖಂಡ): ಕರೊನಾ ಸೋಂಕು ಯಾರನ್ನು, ಯಾವಾಗ, ಹೇಗೆ ಆವರಿಸುತ್ತದೆಯೋ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಕರೊನಾ ಸೋಂಕು ಬಾಧಿಸುವ ಶಂಕೆ ಇದ್ದ ತಕ್ಷಣ ಅಥವಾ ಯಾವುದಾದರೂ ಸೋಂಕಿತರನ್ನು ತಿಳಿದೋ, ತಿಳಿಯದೆಯೋ ಸಂಪರ್ಕ ಮಾಡಿದರೆ ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್​ಗೆ ಒಳಗಾಗುವುದು ಉತ್ತಮ.

ಅದೇ ಕಾರಣಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೇರಿದಂತೆ ಸಚಿವರಾದ ಹರಕ್ ಸಿಂಗ್ ರಾವತ್, ಮದನ್ ಕೌಶಿಕ್ ಮತ್ತು ಸುಬೋಧ್ ಯುನಿಯಲ್ ಸೋಮವಾರ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಅಷ್ಟಕ್ಕೂ ಇವರು ಕ್ವಾರಂಟೈನ್​ಗೆ ಒಳಗಾಗಲು ಕಾರಣ ಎಂದರೆ ಕರೊನಾ ಸೋಂಕಿತ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರನ್ನು ಇವರು ಭೇಟಿ ಮಾಡಿದ್ದರು. ಈ ಭೇಟಿಗೂ ಮುನ್ನ ಸಚಿವ ಸತ್ಪಾಲ್​ ಅವರಿಗೆ ಸೋಂಕು ಇರುವ ವಿಷಯ ತಿಳಿದಿರಲಿಲ್ಲ. ಆದರೆ ಭೇಟಿಯ ನಂತರ ಸೋಂಕಿನ ಬಗ್ಗೆ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲರೂ ಈಗ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಸತ್ಪಾಲ್ ಮಹಾರಾಜ್ ಅವರ ಸಂಪರ್ಕಕ್ಕೆ ಬಂದಿದ್ದ ಪತ್ನಿ, ಕುಟುಂಬ ಸದಸ್ಯರು, ಸಿಬ್ಬಂದಿ ಮತ್ತು ಅವರ ಸಂಪರ್ಕಕ್ಕೆ ಬಂದ ಒಟ್ಟೂ 21 ಮಂದಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

'ಸಚಿವರು ಮತ್ತು ಅಧಿಕಾರಿಗಳು ಸತ್ಪಾಲ್ ಮಹಾರಾಜ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರದ ಕಾರಣ, ಸೋಂಕು ತಗುಲಿರುವ ಸಾಧ್ಯತೆ ತೀರಾ ಕಡಿಮೆ. ಆದ್ದರಿಂದ ಅವರು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ತಿಳಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ರಿಸ್ಕ್​ ಬೇಡ ಎನ್ನುವ ಕಾರಣದಿಂದ ಅವರು ಸ್ವಯಂಪ್ರೇರಿತರಾಗಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.