ನ್ಯೂಸ್

ಸಂಬಳ ಕೇಳಲು ಬಂದ ನೌಕರನ ಕೊಲೆ! ಬಿಜೆಪಿ ಮಾಜಿ ಶಾಸಕನ ಮಗನ ವಿರುದ್ಧ ದೂರು

Mandara

ಕನ್ನೌಜ್​: ಹೋಳಿ ಹಬ್ಬದ ರಂಗು ಎಲ್ಲೆಡೆ ಕಳೆಗಟ್ಟಿದೆ. ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ನೌಕರನೊಬ್ಬ ವೇತನ ಕೇಳಲು ಹೋಗಿದ್ದು, ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಿಜೆಪಿ ಮಾಜಿ ಶಾಸಕನ ಮಗನಿಂದಲೇ ಕೊಲೆ ನಡೆದಿರುವುದಾಗಿ ಹೇಳಲಾಗಿದೆ.

ಬಿಜೆಪಿ ಮಾಜಿ ಶಾಸಕ ಬನ್ವಾರಿ ಲಾಲ್​ ದೊಹರೆ ಅವರ ಮನೆಯಲ್ಲಿ ಸಂದೇಶ್​ ಹೆಸರಿನ ನೌಕರನಿದ್ದ. ಈತ ಪನ್ಬಾದ್​ ಗ್ರಾಮದ ನಿವಾಸಿಯಾಗಿದ್ದು, ಬನ್ವಾರಿ ಅವರ ಮನೆಯಲ್ಲಿ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ. ಆದರೆ ಕಳೆದ ಆರು ತಿಂಗಳಿನಿಂದ ಸಂದೇಶ್​ಗೆ ಸಂಬಳವನ್ನೇ ಕೊಟ್ಟಿರಲಿಲ್ಲವಂತೆ. ಅದರಲ್ಲೂ ಹೋಳಿ ಹಬ್ಬ ಬೇರೆ ಬಂದಿದ್ದರಿಂದಾಗಿ ಸಂದೇಶ್​ ಮಾರ್ಚ್​ 25ರಂದು ಬನ್ವಾರಿ ಅವರ ಮಗ ಅಜಿತ್​ ದೊಹರೆ ಬಳಿ ಸಂಬಳ ಕೇಳಿದ್ದಾನೆ.

ಆದರೆ ಸಂಬಳ ಕೇಳಿದ್ದಕ್ಕೆ ಅಜಿತ್​ ಕೋಪಗೊಂಡಿದ್ದಾನೆ. ಸಂದೇಶ್​ ಮತ್ತು ಅಜಿತ್​ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಅಜಿತ್​ ಸಂದೇಶನಿಗೆ ಹೊಡೆದಿದ್ದಾನೆ. ಬಂದೂಕಿನಿಂದ ಹಿಂಭಾಗದಿಂದ ಹೊಡೆದ ಹಿನ್ನೆಲೆಯಲ್ಲಿ ಸಂದೇಶ್​ ದೇಹದಿಂದ ಸಾಕಷ್ಟು ರಕ್ತ ಹೊರಚಿಮ್ಮಿದೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೂರು ದಿನಗಳ ನಂತರ ಕೊನೆಯುಸಿರೆಳೆದಿದ್ದಾನೆ. ಈ ಕುರಿತಾಗಿ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)