ಸಾಂದರ್ಭಿಕ ಚಿತ್ರ 
ನ್ಯೂಸ್

ಚಾರ್ಜಿಂಗ್ ವೇಳೆ ಸ್ಕೂಟರ್ ಬ್ಯಾಟರಿ ಸ್ಫೋಟ: ಮನೆ ಸುಟ್ಟು ಕರಕಲು, ನಾಲ್ವರು ಪವಾಡ ಸದೃಶ ಪಾರು

ಲಕ್ನೋ: ಇತ್ತೀಚಿನ ದಿನಗಳಲ್ಲಿ ಇವಿ ಬ್ಯಾಟರಿಗಳು ಸ್ಫೋಟಗೊಳ್ಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅದೇ ರೀತಿ ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಕೂಟರ್ ಸ್ಫೋಟಗೊಂಡು ಬೆಂಕಿ ಹೊತ್ತಿದ ಪರಿಣಾಮ ಮನೆ ಸುಟ್ಟು ಭಸ್ಮವಾಗಿರುವ ಘಟನೆ ಉತ್ತರ ಪ್ರದೇಶ ಲಕ್ನೋದಲ್ಲಿ ನಡೆದಿದೆ.

ಠಾಕೂರ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಜಲ್ ನಿಗಮ್ ರಸ್ತೆಯ ಮೊಹಮ್ಮದ್ ನಸೀಮ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಕೂಟಿ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರ ಕುಟುಂಬದವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಸ್ಫೋಟಗೊಂಡ ಸ್ಕೂಟರ್ ಚೈನೀಸ್ ಆಗಿದ್ದು, ಒಂದೂವರೆ ವರ್ಷದ ಹಿಂದೆ 65 ಸಾವಿರ ರೂ.ಗೆ ಖರೀದಿಸಿದ್ದಾಗಿ ಮೊಹಮ್ಮದ್ ನಸೀಮ್ ಹೇಳಿದ್ದಾರೆ. ಭಾರೀ ಸದ್ದು ಕೇಳಿಸಿದ್ದರೂ ಸ್ಫೋಟ ಸಂಭವಿಸಿದೆಯೋ ಅಥವಾ ಬೆಂಕಿ ಹೊತ್ತಿಕೊಂಡಿದೆಯೋ ಗೊತ್ತಿಲ್ಲ. ನಾನು ಸ್ಕೂಟಿಯನ್ನು ನಮ್ಮ ಮನೆಯ ನೆಲ ಮಹಡಿಯಲ್ಲಿ ಇಟ್ಟಿದ್ದೆ. ಆದರೆ ಕೆಲವು ಗಂಟೆಗಳ ನಂತರ ನಾನು ಮೆಟ್ಟಿಲುಗಳ ಕೆಳಗೆ ಬಂದು ಹೊಗೆ ಮತ್ತು ಜ್ವಾಲೆಯನ್ನು ನೋಡಿದೆ. ಕೂಡಲೇ ಅಕ್ಕಪಕ್ಕದವರ ಸಹಾಯ ಪಡೆದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇನೆ ಎಂದಿದ್ದಾನೆ.

ಅಲ್ಲದೇ, ತಾನು ಯಾವಾಗಲೂ ಬ್ಯಾಟರಿ ಸ್ಕೂಟರ್ ಬಳಸುತ್ತಿದ್ದು, 15 ವರ್ಷಗಳಿಂದ ಇಂತಹ ಸ್ಕೂಟರ್​ನ್ನೇ ಬಳಸುತ್ತಿದ್ದೇನೆ. ಹಿಂದಿನ ಸ್ಕೂಟರ್‌ಗಳು ಭಾರತೀಯ ಬ್ರಾಂಡ್‌ಗಳಿಗೆ ಸೇರಿದ್ದವು. ಆದರೆ ಈ ಬಾರಿ ನಾನು ಈ ಚೈನೀಸ್ ಸ್ಕೂಟಿ ಖರೀದಿಸಿದ್ದು, ಕೇವಲ ಒಂದು ವರ್ಷದ ಬ್ಯಾಟರಿ ವಾರಂಟಿ ಇದೆ. ಜತೆಗೆ ಈ ಸ್ಕೂಟರ್‌ಗಳ ಚಾರ್ಜಿಂಗ್ ಕೇಬಲ್ ಆಗಾಗ್ಗೆ ಬಿಸಿಯಾಗುತ್ತದೆ. ಒಂದು ವೇಳೆ ಇದೇ ಕಾರಣದಿಂದಲೂ ಈ ಅವಘಡ ನಡೆದಿರಬಹುದು ಎಂದು ಎಂದು ನಸೀಮ್​​ ಹೇಳಿದ್ದಾನೆ.(ಏಜೆನ್ಸೀಸ್)