ಲಖನೌ: ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲ ನೀರಿನ ಬಾಟಲಿಗಳು ( water bottles ) ಅಧಿಕೃತವಲ್ಲ. ಅಸಲಿಗಿಂತ ನಕಲಿಗಳೇ ಇಂದು ಹೆಚ್ಚಾಗಿವೆ. ಅವುಗಳನ್ನು ಪತ್ತೆಹಚ್ಚುವುದು ಕೂಡ ಕಷ್ಟವಾಗಿದೆ. ನಿಜವಾದ ನೀರಿನ ಬಾಟಲಿಯ ಬ್ರಾಂಡ್ ಹೆಸರಿನಂತೆ ಲೇಬಲ್ ಹಾಕಿ ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಲೇಬಲ್ನಲ್ಲಿ ಒಂದೆರೆಡು ಅಕ್ಷರಗಳನ್ನು ಬದಲಾಯಿಸಿ ಮೂಲ ಬ್ರಾಂಡ್ ಹೆಸರಲ್ಲಿ ಮಾರಾಟ ಮಾಡಿ ಜನರನ್ನು ವಂಚನೆ ಮಾಡುತ್ತಿದ್ದಾರೆ. ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಗಳಲ್ಲಿ ಇಂತಹ ಬಾಟಲಿಗಳ ಮಾರಾಟ ಸಾಮಾನ್ಯವಾಗಿಬಿಟ್ಟಿವೆ. ಕೆಲ ಸಮಾರಂಭಗಳಲ್ಲೂ ಈ ಬಾಟಲಿಗಳನ್ನು ಬಳಸಲಾಗುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗೂ ಇಂತಹದ್ದೇ ಅನುಭವ ಆಗಿದೆ.
ಬಾಗಪತ್ ಜಿಲ್ಲಾಧಿಕಾರಿ ಜಿತೇಂದ್ರ ಪ್ರತಾಪ್ ಸಿಂಗ್ ಅವರು ಇತ್ತೀಚೆಗೆ ಜಿಲ್ಲೆಯ ಸ್ಥಳೀಯ ಪೊಲೀಸ್ ಪೋಸ್ಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಸ್ನ್ಯಾಕ್ಸ್ ಮತ್ತು ನೀರಿನ ಬಾಟಲಿ ಕೊಡಲಾಗಿತ್ತು. ಈ ವೇಳೆ ಬಿಲ್ಸೇರಿ ( Bilseri ) ಹೆಸರಿನ 500 ಮಿಲಿ ಬಾಟಲಿಯನ್ನು ನೀಡಲಾಗಿತ್ತು. ವಾಸ್ತವವಾಗಿ ಅಧಿಕೃತ ನೀರಿನ ಬ್ರಾಂಡ್ ಹೆಸರು ಬಿಸ್ಲೇರಿ ( Bisleri ). ಆದರೆ, ಜಿಲ್ಲಾಧಿಕಾರಿಗೆ ನೀಡಿದ್ದ ನೀರಿನ ಬಾಟಲಿ ಮೇಲೆ ಬಿಲ್ಸೇರಿ ಎಂದು ಬರೆಯಲಾಗಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ಜಿಲ್ಲಾಧಿಕಾರಿ, ನಕಲಿ ಬಾಟಲಿ ಎಂದು ಗೊತ್ತಾದ ಬಳಿಕ ನಕಲಿ ನೀರಿನ ಬಾಟಲಿ ತಯಾರಿಕಾ ಕಂಪನಿಗಳ ವಿರುದ್ಧ ಬುಲ್ಡೋಜರ್ ಕ್ರಮಕ್ಕೆ ಆದೇಶ ನೀಡಿದರು.
ಬಿಲ್ಸೇರಿ ಹೆಸರಿನ ನೀರಿನ ಬಾಟಲಿಯನ್ನು ಕಂಡು ಜಿಲ್ಲಾಧಿಕಾರಿ ಒಂದು ಕ್ಷಣ ಅಚ್ಚರಿಗೊಂಡರು. ಎಸ್ಪಿ ಅರ್ಪಿತ್ ವಿಜಯ ವರ್ಗಿಯಾ ಅವರೊಂದಿಗೆ, ಜಿಲ್ಲಾಧಿಕಾರಿಗಳು ಬಾಟಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದಕ್ಕೆ ಸರಿಯಾದ ಲೈಸೆನ್ಸ್ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಹಾರ ಸುರಕ್ಷತಾ ಇಲಾಖೆಗೆ ಜಿಲ್ಲಾಧಿಕಾರಿ ಆದೇಶಿಸಿದರು. ಸಹಾಯಕ ಆಹಾರ ಸುರಕ್ಷತಾ ಆಯುಕ್ತ ಮಾನವೇಂದ್ರ ಸಿಂಗ್ ತನಿಖೆ ಆರಂಭಿಸಿದರು. ತನಿಖೆಯ ವೇಳೆ ಸ್ಥಳೀಯ ಅಂಗಡಿ ಮಾಲೀಕ ಭೀಮ್ ಸಿಂಗ್ ಅವರ ಮನೆಯಿಂದ ಅಕ್ರಮ ಗೋದಾಮು ನಡೆಸುತ್ತಿರುವುದು ಕಂಡುಬಂದಿದೆ. ಜಿಲ್ಲೆಯಾದ್ಯಂತ ನಕಲಿ ನೀರಿನ ಬಾಟಲಿಗಳನ್ನು ವಿತರಿಸುತ್ತಿರುವುದು ಕಂಡು ಬಂದಿದೆ.
ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 2663 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಬಿಸ್ಲೆರಿ ಬ್ರಾಂಡ್‌ನಂತೆಯೇ ಹಸಿರು ಬಣ್ಣದ ಲೇಬಲ್ ಹೊಂದಿದೆ. ಅಲ್ಲದೆ, ಇಂಗ್ಲಿಷ್ ಅಕ್ಷರದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಜನರನ್ನು ಯಾಮಾರಿಸುತ್ತಿದ್ದಾರೆ. ಕೆಲ ಬಾಟಲಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇತರ ಬಾಟಲಿಗಳನ್ನು ಬುಲ್ಡೋಜರ್‌ಗಳಿಂದ ನಾಶಪಡಿಸಲಾಯಿತು. ಈ ನಕಲಿ ಬಾಟಲಿ ನೀರಿನ ಉತ್ಪನ್ನಗಳನ್ನು ಹರಿಯಾಣದಿಂದ ಸರಬರಾಜು ಮಾಡಲಾಗುತ್ತಿದ್ದು, ಬಾಗಪತ್‌ನ ವಿವಿಧ ಅಂಗಡಿಗಳಿಗೆ ವಿತರಿಸಲಾಗುತ್ತಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಇಂತಹ ನಕಲಿ ಉತ್ಪನ್ನಗಳ ವಿತರಣೆ ವಿರುದ್ಧ ಕ್ಷಿಪ್ರ ಕ್ರಮ ಕೈಗೊಳ್ಳಲು ವಿಶೇಷ ತಂಡ ರಚಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು. (ಏಜೆನ್ಸೀಸ್)