ನ್ಯೂಸ್

ಕೇಂದ್ರ ಸರ್ಕಾರದ ಹಣ ಖಾತೆಗೆ ಬಂದ ಬೆನ್ನಲ್ಲೇ ಲವರ್ಸ್​ ಜತೆ 11 ವಿವಾಹಿತ ಮಹಿಳೆಯರು ಪರಾರಿ!

ಲಖನೌ: ಮಹಿಳೆಯರ ರಕ್ಷಣೆಗಾಗಿ ಮತ್ತು ಅವರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಲ್ಲದೆ ಸರ್ಕಾರದ ಹಲವು ಯೋಜನೆಗಳಲ್ಲಿ ಮಹಿಳೆಯರೇ ಮುಖ್ಯ ಫಲಾನುಭವಿಗಳಾಗಿದ್ದಾರೆ. ವಸತಿ ಯೋಜನೆಯಲ್ಲಿ ಮಹಿಳೆಯ ಹೆಸರಿಗೆ ಮನೆ ನೋಂದಣಿ ಮಾಡಲಾಗುತ್ತಿದೆ. ಆದರೆ, ಕೆಲವರು ಸರ್ಕಾರದ ಯೋಜನೆಗಳು ಮತ್ತು ಕಾನೂನುಗಳನ್ನು ತಮ್ಮ ತಪ್ಪು ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದರೆ, ಕೆಲ ಮಹಿಳೆಯರು ಆ ಮೊತ್ತವನ್ನು ತೆಗೆದುಕೊಂಡು ಪತಿಯನ್ನು ಬಿಟ್ಟು ತಮ್ಮ ಪ್ರೇಮಿಗಳ ಜತೆ ಓಡಿ ಹೋಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಡವರ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಜಾರಿಗೆ ತಂದಿರುವುದು ಗೊತ್ತೇ ಇದೆ. ಈ ಯೋಜನೆಯ ಭಾಗವಾಗಿ ಫಲಾನುಭವಿಯ ಖಾತೆಗೆ ಕಂತುಗಳಲ್ಲಿ ಹಣವನ್ನು ಜಮಾ ಮಾಡಲಾಗುವುದು. ಖಾತೆಗೆ ಮೊದಲ ಕಂತಿನ ಹಣ ಜಮೆಯಾದ ಕೂಡಲೇ ಕೆಲ ಮಹಿಳೆಯರು ಪತಿಯನ್ನು ಬಿಟ್ಟು ಪ್ರಿಯಕರನ ಜತೆ ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮಹಾರಾಜಗಂಜ್ ಜಿಲ್ಲೆಯಲ್ಲಿ ಒಟ್ಟು 2,350 ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕೆಲವು ವರ್ಷಗಳ ಹಿಂದೆ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಈ ಆದೇಶದ ಮೊದಲ ಕಂತಿನ ಭಾಗವಾಗಿ ಅಧಿಕಾರಿಗಳು ಫಲಾನುಭವಿಗಳ ಖಾತೆಗೆ 40 ಸಾವಿರ ರೂ. ಜಮಾ ಮಾಡಿದ್ದರು.

ಹಣ ಖಾತೆಗೆ ಜಮೆಯಾದ ಬೆನ್ನಲ್ಲೇ ಜಿಲ್ಲೆಯ ತುತಿಬರಿ, ಶೀತ್ಲಾಪುರ, ಚಾಟಿಯಾ, ರಾಮನಗರ್​, ಬಕುಲ್ ದಿಹಾ, ಖಾಸ್ರಾ, ಕಿಶುನಪುರ, ಮೆಧೌಲಿ ಗ್ರಾಮಗಳ ಕೆಲ ಫಲಾನುಭವಿ ಮಹಿಳೆಯರು ಹಣ ಪಡೆದು ಪ್ರೇಮಿಗಳೊಂದಿಗೆ ಓಡಿ ಹೋಗಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಮಹಿಳೆಯರು ಗಂಡಂದಿರುವ ಸ್ಥಳೀಯ ಠಾಣೆಗೆ ತೆರಳಿ ದೂರು ದಾಖಲಿಸಿ ಬಂದಿದ್ದಾರೆ. ಇದೀಗ ಮಹಿಳೆಯರ ಖಾತೆಗೆ ಎರಡನೇ ಕಂತಿನ ಹಣ ನೀಡುವುದನ್ನು ನಿಲ್ಲಿಸುವಂತೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಯೋಜನೆಗಳು ಹೀಗೂ ಬಳಕೆಯಾಗುತ್ತವೆಯೇ ಎಂದು ಜನರು ಇದೀಗ ಆಶ್ಚರ್ಯ ಪಡುತ್ತಿದ್ದಾರೆ.

ಅಂದಹಾಗೆ ಪಿಎಂಎವೈ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ 2.50 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುತ್ತಿದೆ. ಒಂದು ವೇಳೆ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಧಿಕಾರಿಗಳು ಫಲಾನುಭವಿಗಳಿಂದ ಹಣವನ್ನು ವಾಪಸ್ ಕೇಳಬಹುದು.

ವರದಿಗಳ ಪ್ರಕಾರ, ಕಳೆದ ವರ್ಷವೂ ಉತ್ತರ ಪ್ರದೇಶದಲ್ಲಿ ನಾಲ್ವರು ವಿವಾಹಿತ ಮಹಿಳೆಯರು ಪಿಎಂಎವೈ ಯೋಜನೆಯಡಿ ಹಣ ಪಡೆದ ನಂತರ ತಮ್ಮ ಪ್ರೇಮಿಗಳೊಂದಿಗೆ ಮನೆಯಿಂದ ಓಡಿಹೋಗಿದ್ದರು. ನಾಲ್ವರು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ 50,000 ರೂ.ಗಳ ಅನುದಾನ ಬಂದ ತಕ್ಷಣ ಓಡಿಹೋಗಿದ್ದರು. (ಏಜೆನ್ಸೀಸ್​)