ನ್ಯೂಸ್

Sambhal Violence | ಸಮುದಾಯಗಳ ನಡುವೆ ಬಿರುಕು ಮೂಡಿಸಲು ಅಧಿಕಾರ ದುರುಪಯೋಗ; ಬಿಜೆಪಿ ವಿರುದ್ಧ ರಾಹುಲ್​ಗಾಂಧಿ ಆರೋಪ

ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ಜಾಮಾ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದಂತೆ ಭಾನುವಾರ(ನವೆಂಬರ್​ 24) ನಡೆದ ಗದ್ದಲದ(Sambhal Violence) ನಂತರ ಈ ವಿಚಾರದಲ್ಲಿ ರಾಜಕೀಯ ಶುರುವಾಗಿದೆ. ಬಿಜೆಪಿಯು ಅಧಿಕಾರವನ್ನು ಬಳಸಿಕೊಂಡು ಹಿಂದೂ-ಮುಸ್ಲಿಮರ ನಡುವೆ ಒಡಕು ಮೂಡಿಸುವುದು ರಾಜ್ಯ ಅಥವಾ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(ನವೆಂಬರ್​​ 25) ವಾಗ್ದಾಳಿ ನಡೆಸಿದ್ದಾರೆ.

ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭದ್ರತಾ ಮತ್ತು ಆಡಳಿತ ಸಿಬ್ಬಂದಿ ಸೇರಿದಂತೆ ಮೂವರು ಮೃತಪಟ್ಟ ಒಂದು ದಿನದ ನಂತರ ರಾಹುಲ್​ ಗಾಂಧಿ ಅವರ ಈ ಹೇಳಿಕೆ ಬಂದಿದೆ. ಘರ್ಷಣೆಯಲ್ಲಿ ಗಾಯಗೊಂಡಿದ್ದ ನಾಲ್ಕನೇ ವ್ಯಕ್ತಿ ಇಂದು (ಸೋಮವಾರ) ಆಸ್ಪತ್ರೆಯಲ್ಲಿ ಮೃತಪಟ್ಟದ್ದಾರೆ.

ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ವಿವಾದದ ಬಗ್ಗೆ ರಾಜ್ಯ ಸರ್ಕಾರದ ಪಕ್ಷಪಾತ ಮತ್ತು ಆತುರದ ವರ್ತನೆ ಅತ್ಯಂತ ದುರದೃಷ್ಟಕರ ಎಂದು ರಾಹುಲ್​ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ನಲ್ಲಿ ಬರೆದಿದ್ದಾರೆ. ಹಿಂಸಾಚಾರ ಮತ್ತು ಗುಂಡಿನ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಎಲ್ಲ ಪಕ್ಷಗಳ ಮಾತನ್ನು ಕೇಳದೆ ಆಡಳಿತ ನಡೆಸಿದ ಸಂವೇದನಾರಹಿತ ಕ್ರಮವು ಪರಿಸ್ಥಿತಿಯನ್ನು ಹದಗೆಡಿಸಿತು ಮತ್ತು ಹಲವಾರು ಜನರ ಸಾವಿಗೆ ಕಾರಣವಾಯಿತು. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಹಿಂದೂ-ಮುಸ್ಲಿಂ ಸಮಾಜಗಳ ನಡುವೆ ಬಿರುಕು ಮತ್ತು ತಾರತಮ್ಯ ಸೃಷ್ಟಿಸಲು ಬಿಜೆಪಿ ಅಧಿಕಾರವನ್ನು ಬಳಸುವುದು ರಾಜ್ಯ ಅಥವಾ ದೇಶದ ಹಿತಾಸಕ್ತಿಯಲ್ಲ. ಈ ವಿಚಾರದಲ್ಲಿ ಆದಷ್ಟು ಬೇಗ ಸುಪ್ರೀಂಕೋರ್ಟ್​​​​ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಶಾಂತಿ ಮತ್ತು ಪರಸ್ಪರ ಸೌಹಾರ್ದತೆ ಕಾಪಾಡುವುದು ನನ್ನ ಮನವಿ. ಭಾರತವು ಏಕತೆ ಮತ್ತು ಸಂವಿಧಾನದ ಹಾದಿಯಲ್ಲಿ ಮುನ್ನಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಸೇರಬೇಕು. ಕೋಮುವಾದ ಮತ್ತು ದ್ವೇಷವಲ್ಲ ಎಂದು ಹೇಳಿದ್ದಾರೆ.

ಸಂಭಾಲ್​​ನಲ್ಲಿ ಭಾನುವಾರ ನಡೆದ ಘರ್ಷಣೆಯ ನಂತರ ಜಿಲ್ಲಾಡಳಿತವು ನಿಷೇಧಾಜ್ಞೆ ವಿಧಿಸಿದೆ. ನವೆಂಬರ್ 30ರವರೆಗೆ ಸಂಭಾಲ್‌ಗೆ ಹೊರಗಿನವರು ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಸಂಭಾಲ್ ತಹಸಿಲ್‌ನಲ್ಲಿ ಇಂಟರ್ನೆಟ್ ಸೇವೆಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತ ಸೋಮವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ.

ವಿಷಯ ಏನು?

ಉತ್ತರ ಪ್ರದೇಶದ ಕಾಶಿ ಮತ್ತು ಮಥುರಾ ನಂತರ ಇದೀಗ ಸಂಭಾಲ್‌ನ ಶಾಹಿ ಜಾಮಾ ಮಸೀದಿ ವಿವಾದಕ್ಕೀಡಾಗಿದೆ. ಈ ಸ್ಥಳವು 1529ರಲ್ಲಿ ಬಾಬರನಿಂದ ಕೆಡವಲ್ಪಟ್ಟ ಶ್ರೀ ಹರಿಹರ ದೇವಾಲಯವಾಗಿತ್ತು. ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಸೀದಿಯಲ್ಲಿ ಶಿವಲಿಂಗವಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಶಾಹಿ ಜಾಮಾ ಮಸೀದಿಯ ಸರ್ವೆ ಕಾರ್ಯ ನಡೆಯುತ್ತಿದೆ. ಮಸೀದಿಯನ್ನು ಸರ್ವೆ ಮಾಡಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನವೆಂಬರ್ 19(ಮಂಗಳವಾರ) ರಂದು ನಡೆಸಿದ ಮೊದಲ ಸಮೀಕ್ಷೆಯ ನಂತರ ತಂಡವು ನವೆಂಬರ್ 24( ಭಾನುವಾರ) ರಂದು ಬೆಳಗ್ಗೆ ಎರಡನೇ ಸಮೀಕ್ಷೆಗೆ ಆಗಮಿಸಿತು. ಸಮೀಕ್ಷಾ ತಂಡ ಜಾಮಾ ಮಸೀದಿ ತಲುಪುತ್ತಿದ್ದಂತೆಯೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆ ಗದ್ದಲಕ್ಕೆ ತಿರುಗಿತು. ಸಮೀಕ್ಷಾ ವರದಿಯನ್ನು ನ.26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು 29ಕ್ಕೆ ವಿಚಾರಣೆ ನಿಗದಿಯಾಗಿದೆ.(ಏಜೆನ್ಸೀಸ್​​)