ನ್ಯೂಸ್

ಪ್ರಾದೇಶಿಕ, ಜಾಗತಿಕ ಶಕ್ತಿಯಾಗಿರುವ ಭಾರತವನ್ನು ಸ್ವಾಗತಿಸುತ್ತೇವೆ ಎಂದ ಅಮೆರಿಕ

ವಾಷಿಂಗ್ಟನ್​: ಪ್ರಾದೇಶಿಕ ಮತ್ತು ಜಾಗತಿಕ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬಂದಿರುವ ಭಾರತವನ್ನು ಸ್ವಾಗತಿಸುವುದಾಗಿ ಅಮೆರಿಕ ಹೇಳಿದೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದಿನ ಅವಧಿಯಲ್ಲಿ ಭಾರತದ ಜತೆಗೆ ನಿಕಟವಾಗಿ ಕೆಲಸ ಮಾಡುವುದಕ್ಕೂ ಎದುರು ನೋಡುತ್ತಿರುವುದಾಗಿ ಅದು ಹೇಳಿದೆ. ನವದೆಹಲಿಯಲ್ಲಿ 2+2 ಸಚಿವರ ಮಟ್ಟದ ಸಭೆಗೂ ಮುಂಚಿತವಾಗಿ ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್ ಈ ಹೇಳಿಕೆಯ ಫ್ಯಾಕ್ಟ್​ಶೀಟ್​ ಪ್ರಕಟಿಸಿರುವುದು ಗಮನಾರ್ಹ.

ಜಗತ್ತಿನ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವಗಳು ಪುರಾತನವಾದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿರುವ ರಾಷ್ಟ್ರಗಳಾಗಿವೆ ಭಾರತ ಮತ್ತು ಅಮೆರಿಕ. ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳ್ಳುತ್ತ ಸಾಗುತ್ತಿದ್ದು, ಅನೇಕ ಮೌಲ್ಯಗಳನ್ನು ಹಂಚಿಕೊಂಡು ಮುನ್ನಡೆಯುತ್ತಿವೆ. ಅಲ್ಲದೆ, ಉಚಿತ- ಮುಕ್ತ ಇಂಡೋ-ಪೆಸಿಫಿಕ್​ ಸ್ಥಾಪಿಸುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿವೆ ಎಂದು ಅದು ಹೇಳಿದೆ.

ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್​ ಮೈಕ್ ಪಾಂಪಿಯೋ ಮತ್ತು ಡಿಫೆನ್ಸ್ ಸೆಕ್ರಟರಿ ಮಾರ್ಕ್ ಎಸ್ಪರ್​ ಅವರು ಇಂದು ಬೆಳಗ್ಗೆಯೇ ನವದೆಹಲಿಗೆ ಆಗಮಿಸಿದ್ದಾರೆ. ಅವರು ಇಂದು ಮತ್ತು ನಾಳೆ ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ 2+2 ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. (ಏಜೆನ್ಸೀಸ್)