ನ್ಯೂಸ್

ಭಾರತಕ್ಕೆ ಹಸ್ತಾಂತರಿಸದಂತೆ ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಸಲ್ಲಿಸಿದ್ದ ಅರ್ಜಿ ವಜಾ! Tahawwur Rana

Tahawwur Rana : ಮುಂಬೈ ಮೇಲೆ 2008ರ ನವೆಂಬರ್​ 26ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾಗೆ ಭಾರಿ ಹಿನ್ನಡೆಯಾಗಿದೆ. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ರಾಣಾನನ್ನು ಭಾರತಕ್ಕೆ ಮರಳಿ ಕರೆತರಲು ದಾರಿ ಸುಗಮವಾಗಿದೆ.

64 ವರ್ಷದ ರಾಣಾ, ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದಾನೆ. ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡುವುದನ್ನು ತಡೆಯಬೇಕೆಂದು ಕೋರಿ ಕಳೆದ ಫೆಬ್ರವರಿಯಲ್ಲಿ ಒಂಬತ್ತನೇ ಸರ್ಕ್ಯೂಟ್‌ನ ಸರ್ಕ್ಯೂಟ್ ನ್ಯಾಯಾಧೀಶರಿಗೆ ರಾಣಾ ತುರ್ತು ಅರ್ಜಿಯನ್ನ ಸಲ್ಲಿಸಿದ್ದ. ಆದರೆ, ಕಳೆದ ತಿಂಗಳು ಅದನ್ನು ನಿರಾಕರಿಸಲಾಯಿತು. ಇದಾದ ನಂತರ, ರಾಣಾ ತನ್ನ ತುರ್ತು ಅರ್ಜಿಯನ್ನು ಅಪ್​ಡೇಟ್​ ಮಾಡಿ, ಅದನ್ನು ಅಮೆರಿಕ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದ. ಆ ಅರ್ಜಿಯ ವಿಚಾರಣೆ ಏಪ್ರಿಲ್ 4ರಂದು ನಡೆಯಿತು. ಅಂತಿಮವಾಗಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.

ಭಾರತವು ಹಲವಾರು ವರ್ಷಗಳಿಂದ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತಾ ಬರುತ್ತಿತ್ತು. ಅಲ್ಲದೆ, ಭಾರತವು 2018ರ ಆಗಸ್ಟ್ ತಿಂಗಳಲ್ಲಿ ರಾಣಾ ಬಂಧನಕ್ಕೆ ವಾರಂಟ್ ಸಹ ಹೊರಡಿಸಿದೆ. ಇದರ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಗಡೀಪಾರು ಮಾಡುವುದಾಗಿ ಘೋಷಿಸಿದರು.

2008ರಲ್ಲಿ ನಡೆದ ಭೀಕರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ, ಸಂಚುಕೋರರಲ್ಲಿ ಒಬ್ಬನಾದ ಮತ್ತು ವಿಶ್ವದ ಅತ್ಯಂತ ದುಷ್ಟ ಜನರಲ್ಲಿ ಒಬ್ಬನನ್ನು (ತಹವ್ವೂರ್ ರಾಣಾ) ಭಾರತಕ್ಕೆ ಹಸ್ತಾಂತರಿಸಲು ನನ್ನ ಆಡಳಿತವು ಅನುಮೋದನೆ ನೀಡಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಕಾನೂನು ಕ್ರಮವನ್ನು ಎದುರಿಸಲು ತಹವ್ವೂರ್ ರಾಣಾ ಭಾರತಕ್ಕೆ ಹಿಂತಿರುಗುತ್ತಿದ್ದಾನೆ ಎಂದು ಟ್ರಂಪ್ ಹೇಳಿದ್ದರು.

ಹಸ್ತಾಂತರಕ್ಕೆ ಅನುಮತಿ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಟ್ರಂಪ್​ಗೆ ಧನ್ಯವಾದ ಅರ್ಪಿಸಿದರು ಮತ್ತು "ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಅಗತ್ಯ" ಎಂದು ಪ್ರತಿಪಾದಿಸಿದರು.

ಯಾರು ಈ ರಾಣಾ?

ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾಗಿರುವ ರಾಣಾ, ಮುಂಬೈ ದಾಳಿಯ ಪ್ರಮುಖ ಸಂಚುಕೋರ “ದೌದ್ ಗಿಲಾನಿ” ಎಂದೂ ಕರೆಯಲ್ಪಡುವ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈ ದಾಳಿಯನ್ನು ನಡೆಸುವಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಇ-ತೈಬಾ (LeT) ಗೆ ಬೆಂಬಲ ನೀಡುವಲ್ಲಿ ಹೆಡ್ಲಿ ಮತ್ತು ಪಾಕಿಸ್ತಾನದಲ್ಲಿರುವ ಇತರರಿಗೆ ಸಹಾಯ ಮಾಡಿದ ಆರೋಪ ರಾಣಾ ಮೇಲಿದೆ. (ಏಜೆನ್ಸೀಸ್​)