ನ್ಯೂಸ್

ಮಗುವಿಗೆ ಸ್ಕ್ರೂ, ಬ್ಯಾಟರಿ ತಿನ್ನಿಸಿ ಕೊಲೆ ಮಾಡಿದ ಯುವತಿ; ಬಂಧನ

ಅಮೇರಿಕಾ: ಪೆನ್ಸಿಲ್ವೇನಿಯಾದಲ್ಲಿ ಮಹಿಳೆಯೊಬ್ಬರು ಗೆಳೆಯನ ಅಂಬೆಗಾಲಿಡುವ ಮಗುವಿಗೆ ಬ್ಯಾಟರಿ, ಸ್ಕ್ರೂ ಮತ್ತು ನೇಲ್ ಪಾಲಿಶ್ ರಿಮೂವರ್​ ತಿನ್ನಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪ ಮಾಡಲಾಗಿದೆ.

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಕಳೆದ ವರ್ಷ ಜೂನ್‌ನಲ್ಲಿ ಐರಿಸ್ ರೀಟಾ ಅಲ್ಫೆರಾ ಎಂಬ ಮಗುವಿನ ಹತ್ಯೆ ಮಾಡಿದ್ದ ಅಲೆಸಿಯಾ ಓವೆನ್ಸ್ ಎಂಬಾಕೆಯನ್ನು ಬಂಧಿಸಲಾಯಿತು.

ಪನ್ಸಿಲ್ವೇನಿಯಾದ ಅಟಾರ್ನಿ ಜನರಲ್ ಮಿಚೆಲ್ ಹೆನ್ರಿ ಪ್ರಕಾರ, ಐರಿಸ್ ರೀಟಾ ಎಂಬ ಹೆಣ್ಣು ಮಗುವಿನ ಮರಣ ಆಕೆಯ ರಕ್ತದಲ್ಲಿನ ಅಸಿಟೋನ್‌ನ ಮಾರಣಾಂತಿಕ ಮಟ್ಟದಿಂದಾಗಿ ಸಂಭವಿಸಿದೆ ಎಂದು ಶವಪರೀಕ್ಷೆಯು ನಿರ್ಧರಿಸಿದ ನಂತರ ಅಲೆಸಿಯಾ ಅವರನ್ನು ಬಂಧಿಸಲಾಯಿತು. 20 ವರ್ಷದ ಮಹಿಳೆ ಕೊಲ್ಲುವ ಮೊದಲು ಮಗುವಿನ ಮೇಲೆ ವಸ್ತುಗಳು ಬೀರಬಹುದಾದ ಹಾನಿಕಾರಕ ಪರಿಣಾಮಗಳನ್ನು ಸಂಶೋಧಿಸಿದ್ದಾಳೆ ಎಂದು ವರದಿ ಬಹಿರಂಗಪಡಿಸಿದೆ.

ಜೂನ್ 25, 2023 ರಂದು, ಐರಿಸ್ ಅವರ ತಂದೆ ಬೈಲಿ ಜಾಕೋಬಿ ಅಂಗಡಿಗೆ ಹೋಗಲು ಮನೆಯಿಂದ ಹೊರಟಾಗ 20ರ ಹರೆಯದ ಈ ಮಹಿಳೆ ಮಗಳ ಜತೆ ಇದ್ದಳು. ಸ್ವಲ್ಪ ಸಮಯದ ನಂತರ, ಮಗಳಿಗೆ ಏನೋ ಸಂಭವಿಸಿದೆ ಎಂದು ಓವೆನ್ಸ್ ಶಜಾಕೋಬಿಗೆ ಕರೆ ಮಾಡಿದ್ದಳು. ಕ್ರಿಮಿನಲ್ ದೂರಿನ ಪ್ರಕಾರ, ಬೈಲಿ ಜಾಕೋಬ್ ತನ್ನ ಮಗು ಪ್ರತಿಕ್ರಿಯಿಸದಿರುವುದನ್ನು ಕಂಡು ನ್ಯೂ ಕ್ಯಾಸಲ್ ಮನೆಗೆ ಧಾವಿಸಿದ್ದು ತಕ್ಷಣವೇ 911 ಗೆ ಕರೆ ಮಾಡಿದರು.

ನಾಲ್ಕು ದಿನಗಳ ನಂತರ ಐರಿಸ್ ಅಂಗಾಂಗ ವೈಫಲ್ಯದಿಂದ ಸಾವಿಗೀಡಾದಳು. ಐರಿಸ್ ತನ್ನ ತಾಯಿ ಎಮಿಲಿ ಅಲ್ಫೆರಾ ಮತ್ತು ಅವಳ ಅಜ್ಜಿಯರೊಂದಿಗೆ ವಾಸಿಸುತ್ತಿದ್ದಳು. ಆದರೆ ಅವಳ ತಂದೆ ಜಾಕೋಬಿ ಭೇಟಿಯ ಹಕ್ಕುಗಳನ್ನು ಮಾತ್ರ ಹೊಂದಿದ್ದರು ಎನ್ನಲಾಗಿದೆ.

ಮಗುವಿನ ದೇಹದಲ್ಲಿ ಸೆಳೆತ ಉಂಟಾಗಿ ಹಾಸಿಗೆಯಿಂದ ಬಿದ್ದಿದ್ದರಿಂದ ಅವಳ ತಲೆಗೆ ಪೆಟ್ಟು ಬಿದ್ದಿದೆ ಅಲೆಸಿಯಾ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಬಹಿರಂಗಪಡಿಸಲಾಗಿದೆ. ಆದರೆ ಶವಪರೀಕ್ಷೆಯ ವರದಿಯು 18 ತಿಂಗಳ ಮಗು ಹಲವಾರು ವಾಟರ್ ಬೀಡ್ಸ್ ಸೇವಿಸಿದೆ ಎಂದು ತೋರಿಸಿತು. ಜೊತೆಗೆ ಬಟನ್-ಆಕಾರದ ಬ್ಯಾಟರಿಗಳು ಮತ್ತು ಲೋಹದ ಸ್ಕ್ರೂ ಮೊದಲಾದವು ಆ ಮಗುವಿನ ಹೊಟ್ಟೆಯಲ್ಲಿತ್ತು ಎನ್ನಲಾಗಿದೆ.

ಅಧಿಕಾರಿಗಳು ಅಲೆಸಿಯಾಳ ಫೋನ್ ಅನ್ನು ಪರಿಶೀಲಿಸಿದ ನಂತರ ಅವರು ಫೆಬ್ರವರಿ 2023 ಮತ್ತು ಜೂನ್ 2023 ರ ನಡುವೆ, ಆಕೆ ವಾಟರ್ ಬೀಡ್ಸ್, ಬ್ಯಾಟರಿಗಳು ಮತ್ತು ನೇಲ್ ಪಾಲಿಷ್ ಸೇರಿದಂತೆ ಮಗುವಿಗೆ ಗಂಭೀರ ಹಾನಿ ಅಥವಾ ಸಾವಿಗೆ ಕಾರಣವಾಗುವ ಮನೆಯ ಉತ್ಪನ್ನಗಳ ಮಾಹಿತಿಯನ್ನು ಹುಡುಕಿದ್ದಾರೆ ಎಂದು ತಿಳಿದುಬಂತು. ಇದಲ್ಲದೆ, ಆಕೆ ಮಕ್ಕಳಿಗೆ ವಿಷಕಾರಿಯಾದ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಮಕ್ಕಳಲ್ಲಿ ಆಕಸ್ಮಿಕ ವಿಷದ ಸಾವುಗಳನ್ನು ಉಂಟುಮಾಡುವ ಔಷಧಿಗಳಿಗಾಗಿ ಹುಡುಕಿದರು ಎಂದು ಪೊಲೀಸರು ಹೇಳಿದ್ದಾರೆ.