ನ್ಯೂಸ್

ನಿರೂಪಕಿ ಲೈವ್ ಸುದ್ದಿ ಓದುತ್ತಿದ್ದಾಗಲೇ ಪ್ರಪೋಸ್ ಮಾಡಿದ ಗೆಳೆಯ

ನವದೆಹಲಿ: ಲೈವ್ ಸುದ್ದಿ ಓದುತ್ತಿದ್ದ ಮಹಿಳಾ ಸುದ್ದಿ ನಿರೂಪಕಿಗೆ ಒಂದು ಸುದ್ದಿ ನೋಡಿ ಎಷ್ಟು ಖುಷಿ ಆಗುತ್ತದೆಯೋ ಅಷ್ಟೇ ಆಶ್ಚರ್ಯವೂ ಆಗಿದೆ. ಆಕೆಗೆ ಸರ್​​ಪ್ರೈಸ್ ಆಗಿದ್ದು ಏಕೆ?, ಆ ನಿರೂಪಕಿ ಯಾರು? ಮುಂತಾದ ವಿವರಗಳಿಗಾಗಿ ಮುಂದೆ ಓದಿ...

ವಿದೇಶಿ ಸುದ್ದಿ ವಾಹಿನಿಯ ಖ್ಯಾತ ನಿರೂಪಕಿ ಕಾರ್ನೆಲಿಯಾ ನಿಕೋಲ್ಸನ್ ಲೈವ್ ಕ್ಯಾಮೆರಾದಲ್ಲಿ ಸುದ್ದಿ ಓದುತ್ತಿದ್ದಾಗ ಆಕೆಯ ಬಾಯ್ ಫ್ರೆಂಡ್ ಸರ್​​​ಪ್ರೈಸ್​​​ ಕೊಟ್ಟಿದ್ದಾರೆ. ವಿಡಿಯೋದ ಆರಂಭದಲ್ಲಿ, ಟೆಲಿಪ್ರಾಂಪ್ಟರ್‌ನಲ್ಲಿ ಬರೆದ ಸುದ್ದಿಯನ್ನು ಓದುವಾಗಲೇ ಅದು ತನ್ನ ಬಗ್ಗೆಯೇ ಸುದ್ದಿ ಎಂದು ನಿರೂಪಕಿಗೆ ಅರ್ಥವಾಗುತ್ತದೆ. ಆಗ ನಗಲು ಪ್ರಾರಂಭಿಸುತ್ತಾರೆ. ನಮ್ಮ ವರದಿಗಾರ ರಿಲೆ ನಗೆಲ್ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮಗೆ ನೀಡಲಿದ್ದಾರೆ ಎಂದು ಕಾರ್ನೆಲಿಯಾ ಹೇಳುತ್ತಾರೆ. ಆಗ ಕಾರ್ನೆಲಿಯಾ ಮತ್ತು ರಿಲೆಯ ಚಿತ್ರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ.

ಏತನ್ಮಧ್ಯೆ, ರಿಲೆ ಹೂಗಳ ಪುಷ್ಪಗುಚ್ಛದೊಂದಿಗೆ ಸ್ಟುಡಿಯೋಗೆ ಬರುತ್ತಾರೆ. ಆ ನಂತರ "ಕಾರ್ನೆಲಿಯಾ ಮತ್ತು ನಾನು 4 ವರ್ಷಗಳ ಹಿಂದೆ ಮೊಂಟಾನಾದ ಸುದ್ದಿ ಕೇಂದ್ರದಲ್ಲಿ ಭೇಟಿಯಾದೆವು. ಈ ಬಗ್ಗೆ ಜನರಿಗೆ ನಾನು ವಿಶೇಷವಾದ ವರದಿಯನ್ನು ತಿಳಿಸುತ್ತೇನೆ'' ಎನ್ನುತ್ತಾರೆ.

"ನಾನು ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದಾಗಲೇ ಮನಸೋತೆ. ನಿಮ್ಮ ವ್ಯಕ್ತಿತ್ವ ಅದ್ಭುತವಾಗಿದೆ. ನೀವು ಎಲ್ಲರನ್ನು ನಗುವಂತೆ ನೋಡಿಕೊಳ್ಳುತ್ತೀರಿ ಎಂದು ಪುಷ್ಪಗುಚ್ಛದ ಜೊತೆಗೆ ತನ್ನ ಜೇಬಿನಿಂದ ಉಂಗುರವನ್ನು ತೆಗೆದುಕೊಂಡು ನೀವು ನನ್ನನ್ನು ಮದುವೆಯಾಗುತ್ತೀರಾ?'' ಎಂದು ಪ್ರಪೋಸ್ ಮಾಡುತ್ತಾರೆ.

ಇದೆಲ್ಲವೂ ನೇರ ಪ್ರಸಾರದ ಮೂಲಕ ಪ್ರಸಾರವಾಗುತ್ತದೆ. ನಂತರ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋಗೆ ಜನರು ಸಾಕಷ್ಟು ಕಾಮೆಂಟ್ ಮಾಡಲು ಪ್ರಾರಂಭಿಸಿದ್ದು, "ಇದು ಪ್ರೀತಿಯನ್ನು ವ್ಯಕ್ತಪಡಿಸುವ ಅತ್ಯಂತ ವಿಶಿಷ್ಟವಾದ ಮಾರ್ಗವಾಗಿದೆ'' ಎಂದು ಜೋಡಿಗೆ ಶುಭ ಕೋರಿದ್ದಾರೆ. ಓರ್ವ ಬಳಕೆದಾರರು ' ಈ ಜೋಡಿ ಎಷ್ಟು ಮುದ್ದಾಗಿದೆ' ಎಂದರೆ ಮತ್ತೊಬ್ಬ ಬಳಕೆದಾರರು "ಯಾರಾದರೂ ನನ್ನನ್ನು ಈ ರೀತಿ ಪ್ರಪಂಚದ ಮುಂದೆ ಪ್ರಪೋಸ್​​​ ಮಾಡಿದ್ದರೆ ನಾನು ತಕ್ಷಣ ಹೌದು ಎಂದು ಹೇಳುತ್ತಿದ್ದೆ'' ಎಂದು ಹೇಳಿದ್ದಾರೆ. ' ಹೀಗೆ ಪ್ರೀತಿಸುವವರು ಎಲ್ಲಿ ಸಿಗುತ್ತಾರೆ? ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ.