ನ್ಯೂಸ್

ಅಮೆರಿಕದ ಇಬ್ಬಂದಿತನ: ಅಪಾಯಕಾರಿ ರಾಷ್ಟ್ರ ಎಂದು ಟೀಕಿಸುತ್ತಲೇ ನೆರವು ನೀಡಿಕೆ

ಪಾಕಿಸ್ತಾನ ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವ್ಯಕ್ತಪಡಿಸಿರುವ ಟೀಕೆಯು ಗಂಭೀರ ಸ್ವರೂಪದ್ದೋ ಅಥವಾ ಕೇವಲ ತೋರಿಕೆಯದೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದೆಡೆ ಪಾಕಿಸ್ತಾನವನ್ನು ಟೀಕಿಸುತ್ತಲೇ ಇನ್ನೊಂದೆಡೆ ಅದಕ್ಕೆ ಮಿಲಿಟರಿ ನೆರವನ್ನು ನೀಡಿ ಪೋಷಿಸುವುದನ್ನು ಗಮನಿಸಿದರೆ ಅಮೆರಿಕದ ಅಧ್ಯಕ್ಷರು ಇಬ್ಬಂದಿನೀತಿ ಪ್ರದರ್ಶಿಸುತ್ತಿದ್ದಾರೆಯೇ ಅನುಮಾನವನ್ನೂ ಹುಟ್ಟುಹಾಕುತ್ತದೆ. 1998ರಲ್ಲಿ ಪಾಕಿಸ್ತಾನವು ಪರಮಾಣು ಅಸ್ತ್ರಗಳ ಪರೀಕ್ಷೆ ನಡೆಸಿದ ಸಂದರ್ಭದಿಂದಲೇ ಅಮೆರಿಕವು ಆ ದೇಶದಲ್ಲಿನ ಅಣ್ವಸ್ತ್ರಗಳ ಸುರಕ್ಷೆ ಕುರಿತಂತೆ ಕಳವಳವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಏಕೆಂದರೆ, ಪಾಕಿಸ್ತಾನವು ಉಗ್ರರು ಹಾಗೂ ಜಿಹಾದಿ ಭಯೋತ್ಪಾದಕರಿಗೆ ಪ್ರಮುಖ ನೆಲೆಯಾಗಿದೆ. ಅಲ್ಲದೆ, ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮತ್ತೆ ಅಧಿಕಾರ ಸ್ಥಾಪಿಸಿದ್ದಾರೆ. ಅಣ್ವಸ್ತ್ರಗಳು ಇಂತಹ ದುಷ್ಟರ ಕೈಗೆಟುಕಿದರೆ ಜಗತ್ತಿಗೆ ಎದುರಾಗಬಹುದಾದ ಅಪಾಯದ ಆತಂಕ ಸರ್ವವಿದಿತ.

ಅದರಲ್ಲೂ, ತನ್ನ ವಿರುದ್ಧವೇ ಈ ಮಾರಕ ಅಸ್ತ್ರ ಪ್ರಯೋಗವಾದರೆ ಗತಿಯೇನು ಎಂಬ ಚಿಂತೆ ಬೈಡೆನ್ ಅವರದ್ದಾಗಿರಬಹುದು. ಭಯೋತ್ಪಾದಕರಿಗೆ ಸುರಕ್ಷಿತ ನೆಲೆ ಒದಗಿಸಿದ್ದಕ್ಕಾಗಿ ಡೋನಾಲ್ಡ್ ಟ್ರಂಪ್ ನೇತೃತ್ವದ ಈ ಹಿಂದಿನ ಅಮೆರಿಕ ಸರ್ಕಾರವು ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು 2018ರ ಜನವರಿಯಲ್ಲಿ ಕೈಗೊಂಡಿತ್ತು. ಬರಾಕ್ ಒಬಾಮಾ ನೇತೃತ್ವದ ಆಡಳಿತ ಕೂಡ 2011ರಲ್ಲಿ ಇದೇ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಸಹಾಯವನ್ನು ಸ್ಥಗಿತಗೊಳಿಸಿತ್ತು. ಆದರೆ, ಅಮೆರಿಕದ ಪ್ರಸ್ತುತ ಅಧ್ಯಕ್ಷರು ಈ ಹಿಂದೆ ಸೆನೆಟ್ ಸದಸ್ಯರಾಗಿದ್ದಾಗಿನಿಂದಲೂ ಪಾಕ್​ಗೆ ಮಿಲಿಟರಿ ಹಾಗೂ ಇತರೆ ನೆರವನ್ನು ನೀಡುವ ಅಗತ್ಯವನ್ನು ಪ್ರತಿಪಾದಿಸಿಕೊಂಡೇ ಬಂದಿದ್ದಾರೆ. 3600 ಕೋಟಿ ರೂಪಾಯಿ ಮೊತ್ತದ ಎಫ್ 16 ಯುದ್ಧವಿಮಾನ ಹಾಗೂ ಸೇನಾ ಉಪಕರಣಗಳ ನೆರವನ್ನು ಪಾಕಿಸ್ತಾನಕ್ಕೆ ಒದಗಿಸುವ ನಿರ್ಧಾರವನ್ನು ಬೈಡೆನ್ ಸರ್ಕಾರ ಕೆಲ ದಿನಗಳ ಹಿಂದೆಯಷ್ಟೇ ಕೈಗೊಂಡಿದೆ.

ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ ಇಲ್ಲದ ಪಾಕಿಸ್ತಾನವು ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಬಹುದು ಎಂದು ಬೈಡೆನ್ ಈಗ ಹೇಳುತ್ತಿದ್ದಾರೆ. ಕಾಶ್ಮೀರ ಹಾಗೂ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕುರಿತು ಸಾಕ್ಷ್ಯಾಧಾರ ಸಮೇತ ಗಮನಸೆಳೆದರೂ ಅಮೆರಿಕದಿಂದ ಸೂಕ್ತ ರೀತಿಯಲ್ಲಿ ಸ್ಪಂದನೆ ವ್ಯಕ್ತವಾಗದಿರುವುದು ಭಾರತಕ್ಕೆ ಮೊದಲಿನಿಂದಲೂ ಮನವರಿಕೆಯಾದ ಸಂಗತಿಯೇ ಆಗಿದೆ. ಇದೇ ವೇಳೆ, ಭಯೋತ್ಪಾದನೆ ವಿರುದ್ಧದ ಹೋರಾಟ ನೆಪದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಹಾಗೂ ಯುದ್ಧ ವಿಮಾನಗಳ ನೆರವನ್ನು ಅಮೆರಿಕವು ಒದಗಿಸುತ್ತಲೇ ಬಂದಿದೆ. ‘ಭಯೋತ್ಪಾದನೆ ವಿರುದ್ಧದ ಹೋರಾಟದ ನೆಪದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಒದಗಿಸುವುದರಲ್ಲಿ ಯಾವುದೇ ಸದುದ್ದೇಶ ಈಡೇರುವುದಿಲ್ಲ.

ಭಯೋತ್ಪಾದನೆ ನಿಗ್ರಹಕ್ಕಾಗಿ ಈ ನೆರವನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಯಾರನ್ನೂ ಮೂರ್ಖರನ್ನಾಗಿಸಲಾಗದು. ಈ ಯುದ್ಧವಿಮಾನಗಳನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಭಾರತದ ವಿದೇಶಾಂಗ ಎಸ್. ಜೈಶಂಕರ್ ಅಮೆರಿಕವನ್ನು ಕೆಲ ದಿನಗಳ ಹಿಂದೆಯಷ್ಟೇ ತರಾಟೆಗೆ ತೆಗೆದುಕೊಂಡಿದ್ದು ಗಮನಾರ್ಹ. ಆದರೆ, ಬೈಡೆನ್ ಆಡಳಿತ ಭಯೋತ್ಪಾದನೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡದೆ, ಅಣ್ವಸ್ತ್ರ ಭೀತಿಯ ಚೌಕಟ್ಟಿಗೆ ಸೀಮಿತವಾಗಿ ಗಮನಿಸುತ್ತಿದೆಯೇ ಎಂಬ ಸಂಶಯವೂ ಮೂಡುತ್ತದೆ. ಪಾಕ್ ಧೂರ್ತತನದ ಎಲ್ಲ ಆಯಾಮಗಳನ್ನು ಅಮೆರಿಕ ಅರಿಯುವುದೊಳಿತು.