ನ್ಯೂಸ್

ಆಸ್ಪತ್ರೆಯಿಂದ ಹೊರಬಂದು ಬೆಂಬಲಿಗರತ್ತ ಕೈಬೀಸಿದ ಟ್ರಂಪ್: ಕೋವಿಡ್​ ಬಗ್ಗೆ ಅಮೆರಿಕ ಅಧ್ಯಕ್ಷರು ಹೇಳಿದ್ದೇನು?

ವಾಷಿಂಗ್ಟನ್​: ಕರೊನಾದಿಂದಾಗಿ ಆಸ್ಪತ್ರೆ ಸೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆಳಗ್ಗೆ (ಭಾರತೀಯ ಕಾಲಮಾನ) ಆಸ್ಪತ್ರೆಯಿಂದ ಹೊರಬಂದು ತಮ್ಮ ಬೆಂಬಲಿಗರತ್ತ ಕೈಬೀಸಿದರು.

ವಾಲ್ಟರ್​ ರೀಡ್​ ಆರ್ಮಿ ಆಸ್ಪತ್ರೆಯಿಂದ ಹೊರಬಂದ ಟ್ರಂಪ್​ ಕಪ್ಪು ಬಣ್ಣದ ಎಸ್​ಯುವಿ ಕಾರಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸಿದರು. ಈ ವೇಳೆ ಬೆಂಬಲಿಗರು ಟ್ರಂಪ್​ 2020 ಧ್ವಜ ಹಾರಿಸಿ ಯುಎಸ್​ಎ...ಯುಎಸ್ಎ ಎಂದು ಘೋಷಣೆ ಕೂಗಿದರು. ಟ್ರಂಪ್​ ಬೆಂಬಲಿಗರತ್ತ ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ತಮ್ಮ ಕೋವಿಡ್​ ಅನುಭವದ ಬಗ್ಗೆ ಪ್ರತಿಕ್ರಿಯಿಸಿ, ನಿಜಕ್ಕೂ ಇದೊಂದು ಆಸಕ್ತಿದಾಯಕ ಪ್ರಯಾಣವಾಗಿತ್ತು. ಕೋವಿಡ್​ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಶಾಲೆಗೆ ಹೋಗಿ ಕಲಿತಂತಾಯಿತು ಎಂದು ಆಸ್ಪತ್ರೆಯ ಕೊಠಡಿಯಲ್ಲಿ ನಿಂತು ಮಾತನಾಡಿರುವ ವಿಡಿಯೋವನ್ನು ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

ಟ್ರಂಪ್​ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಇತ್ತೀಚಿನ ದಿನಗಳಲ್ಲಿ ಎರಡು ಬಾರಿ ಇದ್ದಕ್ಕಿದ್ದಂತೆ ಕುಸಿಯಿತು. ಆದರೂ ಸೋಮವಾರದಿಂದಲೇ ಅವರನ್ನು ಬಿಡುಗಡೆ ಮಾಡಬಹುದೆಂದು ಇದಕ್ಕೂ ಮುನ್ನ ಟ್ರಂಪ್​ ಅವರ ವೈದ್ಯಕೀಯ ತಂಡ ಹೇಳಿತ್ತು. ಇಂದು ಬೆಳಗ್ಗೆ ಟ್ರಂಪ್​ ವೈಟ್​ ಹೌಸ್​ ತಲುಪಲ ಬಹುದು ಮತ್ತು ಅಲ್ಲಿಯೇ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಟ್ರಂಪ್​ಗೆ ಉಸಿರಾಟ ತೊಂದರೆ, ಜ್ವರ, ಕೆಮ್ಮು ಸೇರಿ ಕೆಲ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ವಾಷಿಂಗ್ಟನ್​ನ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಶನಿವಾರ ರಾತ್ರಿ ವೈದ್ಯರು ಹೇಳಿದ್ದರು. (ಏಜೆನ್ಸೀಸ್​)