ನವದೆಹಲಿ: ಕಳೆದ ವಾರ ಜೋರ್ಡಾನ್‌ನಲ್ಲಿ ನಡೆದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಮತ್ತು ಅದರ ಬೆಂಬಲಿತ ಸೇನಾಪಡೆಗಳಿಗೆ ಸಂಬಂಧಿಸಿದ 85 ಕ್ಕೂ ಹೆಚ್ಚು ಕಡೆ ಯುಎಸ್ ಇರಾಕ್ ಮತ್ತು ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿದೆ. ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಮಾಂಡ್ ಮತ್ತು ಕಂಟ್ರೋಲ್ ಹೆಡ್‌ಕ್ವಾರ್ಟರ್ಸ್, ಗುಪ್ತಚರ ಕೇಂದ್ರಗಳು, ಅಡಗುತಾಣ, ಶಸ್ತ್ರಾಸ್ತ್ರಗಳ ದಾಸ್ತಾನು ಕೇಂದ್ರ ಸೇರಿದಂತೆ 85ಕ್ಕೂ ಹೆಚ್ಚು ಕಡೆ ಯುಎಸ್ ಮಿಲಿಟರಿ ಪಡೆಗಳು ದಾಳಿ ನಡೆಸಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್, ಇಂದು, ನನ್ನ ನಿರ್ದೇಶನದ ಮೇರೆಗೆ, ಯುಎಸ್ ಮಿಲಿಟರಿ ಪಡೆಗಳು ಇರಾಕ್ ಮತ್ತು ಸಿರಿಯಾದಲ್ಲಿ ದಾಳಿ ನಡೆಸಿವೆ. ನಾವು ಮಧ್ಯಪ್ರಾಚ್ಯದಲ್ಲಿ ಅಥವಾ ಪ್ರಪಂಚದ ಬೇರೆಲ್ಲಿಯೂ ಸಂಘರ್ಷವನ್ನು ಬಯಸುವುದಿಲ್ಲ. ಆದರೆ, ನಮಗೆ ಹಾನಿ ಮಾಡಲು ಬಯಸುವ ಎಲ್ಲರಿಗೂ ನಾವು ಈ ರೀತಿ ಪ್ರತಿಕ್ರಿಯಿಸುತ್ತೇವೆ ಎಂದು ಜೋ ಬೈಡೆನ್ ಬರೆದುಕೊಂಡಿದ್ದಾರೆ.
30 ನಿಮಿಷಗಳ ಕಾಲ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಹಾಗ ಅದರ ಜೊತೆ ಸಂಬಂಧ ಹೊಂದಿದ್ದ 18ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ಧಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ಮಾಹಿತಿ ನೀಡಲಾಗುವುದು ಎಂದು ಯುಎಸ್ ಮಿಲಿಟರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.