ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಮುಂಬರುವ ಚಿತ್ರ 'ಜೆಎನ್‌ಯು'ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಅವರ ರಾಜಕೀಯ ಪ್ರವೇಶದ ಸುದ್ದಿ ಹೊರಬಿದ್ದಿದ್ದು, ನಟಿ ಶೀಘ್ರದಲ್ಲೇ ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಸಂದರ್ಶನವೊಂದರಲ್ಲಿ ಸ್ವತಃ ಊರ್ವಶಿ ರೌಟೇಲಾ ಈ ಮಾಹಿತಿ ನೀಡಿದ್ದಾರೆ.
ಊರ್ವಶಿಗೆ ರಾಜಕೀಯದಲ್ಲಿ ಎಷ್ಟು ಆಸಕ್ತಿ ಇದೆ ಎಂದು ಕೇಳಿದಾಗ, ನಟಿ ತನಗೆ ಈಗಾಗಲೇ ಟಿಕೆಟ್ ನೀಡಲಾಗಿದೆ ಎಂದು ಬಹಿರಂಗಪಡಿಸಿದರು. "ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ ಮತ್ತು ನಾನು ಅದರ ಭಾಗವಾಗಬೇಕೇ ಅಥವಾ ಬೇಡವೇ ಎಂದು ಈಗ ನಿರ್ಧರಿಸಬೇಕು. ಇನ್ನು ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸಬೇಕು" ಎಂದು ಊರ್ವಶಿ ಹೇಳಿದ್ದಾರೆ. ಆದರೆ ಯಾವ ರಾಜಕೀಯ ಪಕ್ಷ ತನಗೆ ಟಿಕೆಟ್ ನೀಡಿದೆ ಎನ್ನುವುದನ್ನು ಊರ್ವಶಿ ಹೇಳಿಲ್ಲ.
ಅಭಿಮಾನಿಗಳು ಹೇಳಿದ್ದೇನು?
ಈ ಸುದ್ದಿ ತಿಳಿಯುತ್ತಿದ್ದಂತೆ ಊರ್ವಶಿ ರೌಟೇಲಾ ಅವರನ್ನು ಟ್ರೋಲ್ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿ ಕೇಳಿ ಅಭಿಮಾನಿಗಳು ಒಬ್ಬೊಬ್ಬರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 'ಸಹೋದರಿ ದಯವಿಟ್ಟು ನಮ್ಮನ್ನು ಕ್ಷಮಿಸಿ, ಸ್ವಲ್ಪ ಕರುಣೆ ತೋರಿ. ನಿಮ್ಮ ನಟನೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ, ಈಗ ನೀವು ರಾಜಕೀಯಕ್ಕೆ ಬರುತ್ತೀರಾ', ‘ನೀವು ಏನನ್ನು ಕೇಳಿದರೂ ಅವರ ಬಳಿ ಇದೆ’, 'ದೇಶವನ್ನು ಹಾಳು ಮಾಡಲು ನಟ/ನಟಿಯನ್ನು ಕರೆದೊಯ್ಯುತ್ತಾರೆ. ನಾವು ದೇಶವನ್ನು ರಂಜಿಸಬೇಕಾಗಿಲ್ಲ, ನಾವು ಅದನ್ನು ಅಭಿವೃದ್ಧಿಪಡಿಸಬೇಕಾಗಿದೆ' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಊರ್ವಶಿ ರೌಟೇಲಾ ಅವರು ರವಿ ಕಿಶನ್ ಅವರೊಂದಿಗೆ ಜೆಎನ್‌ಯು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ. ಸಿದ್ಧಾರ್ಥ್ ಬೋಡ್ಕೆ, ಪಿಯೂಷ್ ಮಿಶ್ರಾ, ರಶ್ಮಿ ದೇಸಾಯಿ, ಸೋನಾಲಿ ಸೆಹಗಲ್ ಮತ್ತು ವಿಜಯ್ ರಾಜ್ ಅವರಂತಹ ಕಲಾವಿದರು ಸಹ ಚಿತ್ರದಲ್ಲಿ ನಟಿಸಿದ್ದಾರೆ.