ಮುಂಬೈ: ನಟಿ, ರೂಪದರ್ಶಿ ಉರ್ಫಿ ಜಾವೇದ್ ಆಗಾಗ್ಗೆ ತಮ್ಮ ಡ್ರೆಸ್ಸಿಂಗ್ ಸ್ಟೈಲ್ನಿಂದ ಸುದ್ದಿಯಲ್ಲಿರುತ್ತಾರೆ. ವಿವಾದಗಳು ಏನೇ ಇರಲಿ ಸಾಮಾಜಿಕ ಮಾಧ್ಯಮದ ಮೂಲಕ ಸಾರ್ವಜನಿಕರ ಬಳಿ ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಲಿಪ್ ಫಿಲ್ಲರ್ ಫೋಟೋ ಪೋಸ್ಟ್ ಮಾಡಿ, ಇದು ಈಗಿನ ಫೋಟೋವಲ್ಲ 2016-17ರಲ್ಲಿ ತೆಗೆದಿದ್ದು ಎಂದು ಹೇಳುತ್ತಾ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
" ಲಿಪ್ ಫಿಲ್ಲರ್ ಅಥವಾ ಸರ್ಜರಿ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು 18 ನೇ ವಯಸ್ಸಿನಿಂದ ಲಿಪ್ ಫಿಲ್ಲರ್ ಚಿಕಿತ್ಸೆ ಪಡೆಯುತ್ತಿದ್ದೇನೆ, ಆಗ ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಆದರೆ ನನ್ನ ತುಟಿಗಳು ತುಂಬಾ ತೆಳುವಾಗಿದ್ದ ಕಾರಣ ದೊಡ್ಡದಾದ ತುಟಿ ಪಡೆಯಲು ಬಯಸಿದ್ದೆ. ಇದು ಅತ್ಯಂತ ನೋವಿನ ಸಂಗತಿ. ಆದರೆ ಇಂತಹ ವಿಷಯಗಳಿಗಾಗಿ ವೈದ್ಯರ ಬಳಿ ಹೋಗುವಾಗ ಎಲ್ಲರೂ ಬಹಳ ಜಾಗರೂಕರಾಗಿರಿ. ಪರಿಶೀಲಿಸಿ, ನಂತರ ತೆರಳಿರಿ. ಲಿಪ್ ಫಿಲ್ಲರ್ ಪಡೆಯಬೇಡಿ ಎಂದು ಜನರಿಗೆ ಹೇಳುತ್ತಿಲ್ಲ. ಆದರೆ ವಾಸ್ತವವಾಗಿ ನಾನು ಹೇಳಲು ಪ್ರಯತ್ನಿಸುತ್ತಿರುವುದು ಫಿಲ್ಲರ್‌ಗಳು ಅಥವಾ ಬೊಟೊಕ್ಸ್ ಪಡೆದುಕೊಳ್ಳುವಾಗ ಜಾಗರೂಕರಾಗಿರಿ. ಮುಖಕ್ಕೆ ಯಾವುದು ಸರಿಹೊಂದುತ್ತದೆ ಎಂಬುದನ್ನೂ ಗಮನಿಸಬೇಕು. ಯಾವುದೇ ವೈದ್ಯರ ಬಳಿಗೆ ಹೋಗುವ ಮೊದಲು ಕೂಲಂಕುಷವಾಗಿ ಸಂಶೋಧಿಸಬೇಕು. ನಿಮ್ಮ ದೇಹದ ಯಾವುದೇ ಭಾಗಗಳ ಬಗ್ಗೆ ಕೀಳರಿಮೆ ಹೊಂದಿದ್ದರೆ ದ್ವೇಷಿಸುವ ಬದಲು ಫಿಲ್ಲರ್‌ಗಳು ಅಥವಾ ಶಸ್ತ್ರಚಿಕಿತ್ಸೆಗಳನ್ನು ಆರಿಸಿಕೊಳ್ಳುವುದು ಉತ್ತಮ. ಆದರೆ ಉತ್ತಮ ವೈದ್ಯರಿಂದ ಮಾತ್ರ'' ಎಂದು ಸಲಹೆ ನೀಡಿದ್ದಾರೆ ಉರ್ಫಿ.
ಈ ಪೋಸ್ಟ್ ಸದ್ಯ ಸಾಕಷ್ಟು ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಉರ್ಫಿ ಪ್ರಮಾಣಿಕತೆಗೆ ಹಲವರು ಶ್ಲಾಘಿಸಿದ್ದಾರೆ. "ಕ್ಯಾಂಡಿಡ್ ಪರ್ಸನಾಲಿಟಿ, ನಿಮಗೆ ಧೈರ್ಯವಿದೆ" ಎಂದೆಲ್ಲಾ ಹಾಡಿ ಹೊಗಳಿದ್ದಾರೆ. ಡಾರ್ಕ್ ಸರ್ಕಲ್ ಬಗ್ಗೆ ಉರ್ಫಿ ನಿರಂತರವಾಗಿ ಟ್ರೋಲ್ ಎದುರಿಸಿದಾಗ ಐ ಫಿಲ್ಲರ್ ಬಗ್ಗೆಯೂ ಉರ್ಫಿ ಸ್ಪಷ್ಟನೆ ಕೊಟ್ಟಿದ್ದರು.