ನ್ಯೂಸ್

ಛಲಬಿಡದೆ ಅಡೆತಡೆ ಮೆಟ್ಟಿನಿಂತು ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡಿದ ಕುರುಬನ ಮಗ! ಯಾರು ಈ ಬೀರಪ್ಪ ಸಿದ್ದಪ್ಪ? UPSC Beerappa Siddappa

UPSC Beerappa Siddappa : ಯಶಸ್ಸೆಂಬುದು ಯಾರ ಸ್ವತ್ತೂ ಅಲ್ಲ... ಮನಸಾರೆ, ಕಷ್ಟಪಟ್ಟು ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಹಾಗೂ ನಿರಂತರವಾಗಿ ಮತ್ತು ಅವಿಶ್ರಾಂತವಾಗಿ ಕೆಲಸ ಮಾಡುವ ಕೌಶಲ್ಯವಿದ್ದರೆ, ಅತ್ಯಂತ ಕಷ್ಟಕರವಾದ ಕೆಲಸವನ್ನು ಸಹ ಸಾಧಿಸಬಹುದು ಎಂದು ಹೇಳಲಾಗುತ್ತದೆ. ಆ ಮಾತನ್ನ ಕುರುಬನ ಮಗ ಇದೀಗ ಅಕ್ಷರಶಃ ನಿಜ ಮಾಡಿದ್ದು, ಅತ್ಯಂತ ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ 551ನೇ ರ‍್ಯಾಂಕ್ ಗಳಿಸಿದ್ದಾರೆ. ಶೀಘ್ರದಲ್ಲೇ ಐಪಿಎಸ್ ಅಧಿಕಾರಿ ಸಹ ಆಗಲಿದ್ದಾರೆ.

ಇತ್ತೀಚೆಗಷ್ಟೇ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳು ಬಿಡುಗಡೆಯಾಯಿತು. ಪ್ರತಿ ವರ್ಷ, ಅಪಾರ ಸಂಖ್ಯೆಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಆದರೆ, ಕೆಲವೇ ಅಭ್ಯರ್ಥಿಗಳು ಅದರಲ್ಲಿ ಉತ್ತೀರ್ಣರಾಗುತ್ತಾರೆ. ಅದರಲ್ಲೂ ಕೆಲವರು ತಮಗಿರುವ ಅಡೆತಡೆಗಳನ್ನು ಮೆಟ್ಟಿನಿಂತು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅಲ್ಲದೆ, ಸ್ಫೂರ್ತಿಯ ವ್ಯಕ್ತಿಯಾಗುತ್ತಾರೆ. ಅದೇ ರೀತಿ ಈ ಬಾರಿ ಕುರುಬ ಸಮುದಾಯದ ಯುವಕ ಈ ಸಾಧನೆ ಮಾಡಿದ್ದು, ಅವರ ಯಶಸ್ಸಿನ ಕಥೆಯ ಬಗ್ಗೆ ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ಮಹಾರಾಷ್ಟ್ರದ ಅಮ್ಗೆ ಗ್ರಾಮದ ಬೀರಪ್ಪ ಸಿದ್ದಪ್ಪ ಡೋನಿ 2024ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಶುಭ ಸುದ್ದಿ ಪ್ರಕಟವಾದ ತಕ್ಷಣ ಸಿದ್ದಪ್ಪ ಗ್ರಾಮದಲ್ಲಿ ಸಂಭ್ರಮಾಚರಣೆಗಳು ಶುರುವಾದವು. ಇದು ಕೇವಲ ಒಬ್ಬ ಯುವಕನ ಯಶಸ್ಸಲ್ಲ, ಅವನ ಕುಟುಂಬದ ಮತ್ತು ಆ ಹಳ್ಳಿಯ ಜನರ ಯಶಸ್ಸೂ ಹೌದು. ಕುರಿಗಳೊಂದಿಗೆ ತನ್ನ ಜೀವನವನ್ನು ಕಳೆಯುವ ಈ ಸಾಮಾನ್ಯ ಯುವಕ, ಯುಪಿಎಸ್​ಸಿ ಸಿಎಸ್​ಇ 2024ರಲ್ಲಿ 551ನೇ ರ‍್ಯಾಂಕ್ ಗಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಕಠಿಣ ಪರಿಶ್ರಮ ಹಾಕಿದರೆ, ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಬೀರಪ್ಪ ಸಾಬೀತುಪಡಿಸಿದ್ದಾರೆ.

ಬೆಳಗಾವಿ ಬಳಿಯ ನಾನಾವಾಡಿಯ ಹೊಲದಲ್ಲಿ ಕುರಿ ಮೇಯಿಸುತ್ತ ಸಂಬಂಧಿಕರ ಮನೆಯಲ್ಲಿ ರಜೆಯಲ್ಲಿದ್ದ ಬೀರಪ್ಪ ಸಿದ್ದಪ್ಪ ಅವರಿಗೆ ಶುಭ ಸುದ್ದಿ ಸಿಕ್ಕಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಕರೆ ಮಾಡಿ ಬೀರಪ್ಪ ಅವರನ್ನು ಅಭಿನಂದಿಸಿದರು. ಇನ್ನು ಬೀರಪ್ಪ ಅವರಿಗೆ ಅವರ ತಂದೆ ಸಿದ್ದಪ್ಪ, ತಾಯಿ ಬಾಲವ್ವ ಮತ್ತು ಇತರ ಕುಟುಂಬ ಸದಸ್ಯರು, ಸಾಂಪ್ರದಾಯಿಕ ಆರತಿ ಮಾಡಿ, ಹಾರ ಹಾಕಿದರು. ಈ ಸಂದರ್ಭದಲ್ಲಿ, ಕುಟುಂಬವು ಅವರಿಗೆ ಕುರಿಮರಿಯನ್ನು ಉಡುಗೊರೆಯಾಗಿ ನೀಡಿತು. ಬೀರಪ್ಪ ಐಪಿಎಸ್ ಅಧಿಕಾರಿಯಾಗುವ ಮಹತ್ವಾಕಾಂಕ್ಷೆಯನ್ನು ಸಂತೋಷದಿಂದ ವ್ಯಕ್ತಪಡಿಸಿದರು.

ಬೀರಪ್ಪ ಸರಳ ಕುರುಬ ಕುಟುಂಬದಲ್ಲಿ ಜನಿಸಿದರು. ಅವರಿಗೆ ಜಾತಿ ದೇವರ ಹೆಸರನ್ನು ಇಡಲಾಯಿತು. ಬೀರಪ್ಪ ತಮ್ಮ ಇಂಜಿನಿಯರಿಂಗ್ ಮುಗಿಸಿ, ಬಿ.ಟೆಕ್ ಪದವಿ ಪಡೆದರು. ತಮ್ಮ ಅಣ್ಣನಂತೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕೆಂಬುದು ಅವರ ಕನಸಾಗಿತ್ತು. ಆದರೆ, ಸಂದರ್ಭಗಳಿಂದಾಗಿ, ಅವರು ಆ ದಿಕ್ಕಿನಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಅವರು ಸ್ವಲ್ಪ ಕಾಲ ಇಂಡಿಯಾ ಪೋಸ್ಟ್‌ನಲ್ಲಿಯೂ ಕೆಲಸ ಮಾಡಿದರು. ಆದರೆ, ಸಿವಿಲ್ ಸರ್ವೀಸಸ್ ಬರೆಯುವುದು ಅವರ ಗುರಿಯಾಗಿತ್ತು.

ಇಂಡಿಯಾ ಪೋಸ್ಟ್‌ನಲ್ಲಿ ಕೆಲಸ ಬಿಟ್ಟ ನಂತರ ಬೀರಪ್ಪ ಯುಪಿಎಸ್‌ಸಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿದರು. ಆದಾಗ್ಯೂ, ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಲಿಲ್ಲ. ಆದಾಗ್ಯೂ, ಅವರು ತಮ್ಮ ಪರಿಶ್ರಮವನ್ನು ಬಿಡಲಿಲ್ಲ. ಮೂರನೇ ಪ್ರಯತ್ನದಲ್ಲಿ, ಬೀರಪ್ಪ 551 ನೇ ರ‍್ಯಾಂಕ್ ಪಡೆಯುವ ಮೂಲಕ ತಮ್ಮ ಕುಟುಂಬ, ಗ್ರಾಮ ಮತ್ತು ಸಾಮಾಜಕ್ಕೆ ಖ್ಯಾತಿ ತಂದಿದ್ದಾರೆ.

ಬೀರಪ್ಪನ ತಂದೆ ಸಿದ್ದಪ್ಪ ಡೋನಿಗೆ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಹೆಚ್ಚು ತಿಳಿದಿಲ್ಲದಿರಬಹುದು ಆದರೆ, ಅವರಿಗೆ ತನ್ನ ಮಗನ ಮೇಲೆ ಸಂಪೂರ್ಣ ನಂಬಿಕೆ ಇದೆ. ನನ್ನ ಮಗ ದೊಡ್ಡ ಪೊಲೀಸ್ ಅಧಿಕಾರಿಯಾಗುತ್ತಾನೆ ಎಂದು ಜನರು ಹೇಳುತ್ತಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಅಂದಹಾಗೆ ಈ ಯಶಸ್ಸಿನೊಂದಿಗೆ ಬೀರಪ್ಪ ಸಿದ್ದಪ್ಪ ತಮ್ಮ ಸಮಾಜದ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಬೀರಪ್ಪನ ಚಿಕ್ಕಪ್ಪ ಯಲ್ಲಪ್ಪ ಕೂಡ ಸಂತೋಷ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಕರ್ನಾಟಕದ ಗಡಿಯಾಚೆಗಿನ ಮತ್ತೊಂದು ಹಳ್ಳಿಯ ನಿವಾಸಿಗಳು ಸಹ ಸಂಭ್ರಮಿಸುತ್ತಿದ್ದಾರೆ. ಬೆಳಗಾವಿಯ ಕೊಡ್ಲಿವಾಡದ ಮತ್ತೊಬ್ಬ ಕುರುಬನ ಮಗ ಹನುಮಂತಪ್ಪ ಯಲ್ಲಪ್ಪ ನಂದಿ 910ನೇ ರ‍್ಯಾಂಕ್ ಗಳಿಸಿದ್ದಾರೆ. ಎಲ್ಲ ಅಡೆತಡೆಗಳನ್ನು ನಿವಾರಿಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ, ಅವರ ತಂದೆ ಯಲ್ಲಪ್ಪ, ತಾಯಿ ಕಾಳವ್ವ, ಪತ್ನಿ ಯಶೋದ, ಸಹೋದರ ಆನಂದ್ ಹಾಗೂ ಇತರ ಕುಟುಂಬ ಸದಸ್ಯರು ಹಾಗೂ ಗ್ರಾಮದ ಜನರು ಸಹ ಹೆಮ್ಮೆಪಡುತ್ತಿದ್ದಾರೆ.

ಹನುಮಂತಪ್ಪ 1 ರಿಂದ 7 ನೇ ತರಗತಿಯವರೆಗೆ ತಮ್ಮ ಹುಟ್ಟೂರು ಕೊಡ್ಲಿವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ 8 ರಿಂದ 10 ನೇ ತರಗತಿಗಳನ್ನು ಸತ್ತಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಹನುಮಂತಪ್ಪ ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಿಯುಸಿ ಮುಗಿಸಿದರು. ನಂತರ ಅವರು ಬೆಳಗಾವಿಯ ಗೋಗ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿಐಟಿ) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಮುಗಿಸಿದರು. (ಏಜೆನ್ಸೀಸ್​)