Chhangur Baba : ಸ್ವಯಂ ಘೋಷಿತ ಬಾಬಾ ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಕಳೆದ ಮೂರು ವರ್ಷಗಳಲ್ಲಿ ಸುಮಾರು 500 ಕೋಟಿ ರೂಪಾಯಿ ಹಣವನ್ನು ವಿದೇಶಿ ನಿಧಿಯಾಗಿ ಪಡೆದಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶುಕ್ರವಾರ (ಜುಲೈ11) ತಿಳಿಸಿದೆ.
ಇದರಲ್ಲಿ 200 ಕೋಟಿ ರೂ.ಗಳನ್ನು ಅಧಿಕೃತ ಮೂಲವೆಂದು ದೃಢೀಕರಿಸಲಾಗಿದೆ. ಉಳಿದ 300 ಕೋಟಿ ರೂ.ಗಳನ್ನು ಅಕ್ರಮವಾಗಿ ಹವಾಲಾ ಮೂಲಕ ಬಳಸಿಕೊಂಡು ನೇಪಾಳದ ಮೂಲಕ ರವಾನಿಸಲಾಗಿದೆ ಎಂದು ವರದಿಯಾಗಿದೆ.
ನೇಪಾಳದ ಗಡಿ ಜಿಲ್ಲೆಗಳಾದ ಕಾಠ್ಮಂಡು, ನವಲ್ಪರಾಸಿ, ರೂಪಂದೇಹಿ ಮತ್ತು ಬಂಕೆಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಇದರ ಮೂಲಕ ಹಣವನ್ನು ವರ್ಗಾವಣೆ ನಡೆಸಿದೆ. ಈ ಹಣವನ್ನು ಭಾರತದಲ್ಲಿ ಧಾರ್ಮಿಕ ಮತಾಂತರಕ್ಕೆ ಬಳಸಿಕೊಳ್ಳುವ ಉದ್ದೇಶ ಹೊಂದಿತ್ತು ಎಂದು ಆರೋಪಿಸಲಾಗಿದೆ. ಈ ಖಾತೆಗಳಿಗೆ ಪಾಕಿಸ್ತಾನ, ದುಬೈ, ಸೌದಿ ಅರೇಬಿಯಾ ಮತ್ತು ಟರ್ಕಿ ಸೇರಿದಂತೆ ಮಂತಾದ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಹಣ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನೇಪಾಳದ ಏಜೆಂಟರು ಈ ಹಣವನ್ನು ಛಂಗೂರ್‌ಗೆ ವರ್ಗಾಯಿಸಲು ನೆರವು ನೀಡಿದ್ದಾರೆ. ಬಾಬಾ ಮೂಲತಃ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಮಾಧಪುರದವರು. ಅನೇಕ ಸಂದರ್ಭಗಳಲ್ಲಿ ಶೇ4 ರಿಂದ 5 ರಷ್ಟು ಕಮೀಷನ್ ಪಡೆದು ನಗದು ಠೇವಣಿ ಯಂತ್ರಗಳನ್ನು (CDM) ಬಳಸಿಕೊಂಡು ಹಣವನ್ನು ಠೇವಣಿ ಇಡಲಾಗಿದೆ. ಬಲರಾಂಪುರ್, ಶ್ರಾವಸ್ತಿ, ಬಹ್ರೈಚ್ ಮತ್ತು ಲಖಿಂಪುರದಂತಹ ಜಿಲ್ಲೆಗಳಿಗೆ ಹಣವನ್ನು ತರಲಾಗಿದ್ದು, ಅಲ್ಲಿನ ಸ್ಥಳೀಯರು ನೇಪಾಳಿ ಕರೆನ್ಸಿಯನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಹಾರ ಜಿಲ್ಲೆಗಳಾದ ಮಧುಬನಿ, ಸೀತಾಮರ್ಹಿ, ಪೂರ್ಣಿಯಾ, ಕಿಶನ್‌ಗಂಜ್, ಚಂಪಾರಣ್ ಮತ್ತು ಸುಪೌಲ್‌ಗಳ ಏಜೆಂಟ್‌ಗಳು ಸಹ ನೇಪಾಳದಿಂದ ಹಣವನ್ನು ಕಳ್ಳಸಾಗಣೆ ಮಾಡುವ ಹಗರಣದಲ್ಲಿ ನೆರವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಯೋಧ್ಯಾ ಜಿಲ್ಲೆಗೆ ಅತಿ ಹೆಚ್ಚು ಹಣ ವರ್ಗಾವಣೆಯಾಗಿದ್ದು, ಸ್ಥಳೀಯ ಹಿಂದೂ ಹುಡುಗಿಯರನ್ನು ಇತರ ಧರ್ಮಗಳಿಗೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಛಂಗೂರ್ ಮತ್ತು ಅವರ ಸಹಾಯಕರಿಗೆ ಸಂಬಂಧಿಸಿದ 40 ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.
ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ 10 ವರ್ಷಗಳ ಆದಾಯ ತೆರಿಗೆ ದಾಖಲೆಗಳನ್ನು ಸಹ ಕೇಳಿದ್ದು, ನವೀನ್ ರೋಹ್ರಾಗೆ ಸೇರಿದ ಆರು ಬ್ಯಾಂಕ್ ಖಾತೆಗಳಲ್ಲಿ 34.22 ಕೋಟಿ ರೂ. ಮತ್ತು ನಸ್ರೀನ್ ಎಂಬ ಮಹಿಳೆಯ ಖಾತೆಗಳಲ್ಲಿ 13.90 ಕೋಟಿ ರೂ. ಪತ್ತೆಯಾಗಿದೆ. ಶಾರ್ಜಾ, ದುಬೈ ಅಥವಾ ಯುಎಇಯಲ್ಲಿರುವ ಛಂಗೂರ್‌ನ ಶಂಕಿತ ವಿದೇಶಿ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿರುವುದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಬಲರಾಂಪುರದಲ್ಲಿ ಛಂಗೂರ್ ನಿರ್ಮಿಸಿದ 5 ಕೋಟಿ ರೂ.ಗಳ ಮಹಲನ್ನು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದು, ಅಮೃತಶಿಲೆಯ ಭದ್ರತಾ ಗೇಟ್ ಹೊಂದಿದ್ದ 40 ಕೋಣೆಗಳ ಬಂಗಲೆಯನ್ನು 10 ಬುಲ್ಡೋಜರ್‌ಗಳನ್ನು ಬಳಸಿ ಮೂರು ದಿನಗಳಲ್ಲಿ ಕೆಡವಲಾಗಿದೆ. (ಏಜೆನ್ಸೀಸ್)