ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಸೋಮವಾರ (ಸೆ.18) 55ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಾವೇ ನಿರ್ದೇಶಿಸಿ, ನಾಯಕರಾಗಿ ನಟಿಸುತ್ತಿರುವ ‘ಯುಐ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಟ ಶಿವರಾಜಕುಮಾರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ದುನಿಯಾ ವಿಜಯ್, ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ, ನಿಧಿ ಸುಬ್ಬಯ್ಯ, ಸಂಚಿತ್ ಸಂಜೀವ್ ಹಾಜರಿದ್ದರು. ಟೀಸರ್ ಬಗ್ಗೆ ಉಪೇಂದ್ರ, ‘ಇದು ನಿಮ್ಮೆಲ್ಲ ಕಲ್ಪನೆಗಳನ್ನು ಕೆದಕುವ ಟೀಸರ್. ಮೊದಲೆಲ್ಲ ಕಲ್ಪನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಈಗ ಎಲ್ಲರೂ ತಲೆ ತಗ್ಗಿಸಿಕೊಂಡು ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಹೀಗಾಗಿ ಈ ಟೀಸರ್ ಬಿಟ್ಟಿದ್ದು. ಇವೆಲ್ಲವೂ ಕಲ್ಪನೆಗಳಲ್ಲಿ ಇದ್ದರೆ ಚೆನ್ನ. ಒಬ್ಬೊಬ್ಬರು ಒಂದೊಂದು ದೃಶ್ಯವನ್ನು ಕಲ್ಪಿಸಿಕೊಳ್ಳುತ್ತಾರೆ. ಅದೇ ಈ ಟೀಸರ್‌ನ ಕಾನ್ಸೆಪ್ಟ್’ ಎಂದು ಹೇಳಿದರು. ಉಪೇಂದ್ರ ಅವರಿಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದು, ನಿಧಿ ಸುಬ್ಬಯ್ಯ, ರವಿಶಂಕರ್ ಮುಖ್ಯ ತಾರಾಗಣದಲ್ಲಿದ್ದಾರೆ.
ಕತ್ಲೆ ಕತ್ಲೆ ಕತ್ಲೆ..
ವಿಭಿನ್ನ ಪ್ರಯತ್ನಕ್ಕೆ ಹೆಸರಾದ ಉಪೇಂದ್ರ ‘ಯುಐ’ ಟೀಸರ್ ಕೂಡ ಡಿರೆಂಟ್‌ಆಗಿ ಮಾಡಿದ್ದಾರೆ. ಇಡೀ ಟೀಸರ್ ಕತ್ತಲೆಯಲ್ಲಿದ್ದು, ಹಿನ್ನೆಲೆಯಲ್ಲಿ ಉಪೇಂದ್ರ ನಿರೂಪಣೆ ಜತೆಗೆ ನೀರಿನ ಸದ್ದು, ಹೆಣ್ಣಿನ ಕಿರುಚಾಟ, ‘ಹಸಿವು’ ಎನ್ನುವ ಕೂಗು, ಕುದುರೆ ಓಟದ ಶಬ್ದ ಹೀಗೆ ಹಲವು ಧ್ವನಿಗಳು ಕೇಳಿಬರುತ್ತವೆ. ಆದರೆ, ತೆರೆ ಮೇಲೆ ಎಲ್ಲವೂ ಕತ್ತಲೆ. ಗಾಢವಾದ ಸನ್ನಿವೇಶವಿರಬಹುದು ಎಂದು ಕಲ್ಪಿಸಿಕೊಳ್ಳುವಂತೆ ಮಾಡುತ್ತದೆ. ಈ ಟೀಸರ್ ಸದ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು, ‘ಉಪೇಂದ್ರಗೆ ಮಾತ್ರ ಇಂತಹ ಪ್ರಯತ್ನ ಮಾಡಲು ಸಾಧ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.