ನ್ಯೂಸ್

ಅತ್ತೆ ಜೊತೆ ಮುನಿಸಿಕೊಂಡು ಟೀನಲ್ಲಿ ವಿಷ ಬೆರೆಸಿದ ಸೊಸೆ: ನಂತರ ಆಯ್ತು ಘೋರ ದುರಂತ

ಉತ್ತರಪ್ರದೇಶ: ತನ್ನ ಅತ್ತೆ ಜೊತೆ ಅಸಮಾಧಾನಗೊಂಡ ಸೊಸೆ, ಮನೆ ಸದಸ್ಯರಿಗೆ ಟೀನಲ್ಲಿ ವಿಷ ಬೆರೆಸಿ ಕುಡಿಸಿರುವ ಘಟನೆ ಬಹ್ರೀಚ್ ಪ್ರದೇಶದ ಮಚಿಯಾಹಿ ಗ್ರಾಮದಲ್ಲಿ ನಡೆದಿದೆ.

ವಿಷ ಬೆರೆತ ಟೀ ಕುಡಿದ ಬಳಿಕ 18 ತಿಂಗಳ ಮಗು ಸಾವನ್ನಪ್ಪಿದ್ದು, ನಾಲ್ಕು ಜನ ಸಂಬಂಧಿಕರು ತೀವ್ರ ಅಸ್ವಸ್ಥರಾಗಿದ್ದಾರೆ. ಆರೋಪಿ ಮಹಿಳೆಯ ಮಾವ ಪಂಚಮ್ ಜೈಸ್ವಾಲ್, ಸೋದರ ಮಾವ ಜಿತೇಂದ್ರ, ಸೊಸೆ ಶಿವಾನಿ ಮತ್ತು ಸೃಷ್ಟಿ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ 18 ತಿಂಗಳ ಮಗು ಶಿವನಾಥ, ಆರೋಪಿ ಅನಿತಾಳ ಇನ್ನೊಬ್ಬ ಅತ್ತಿಗೆಯ ಮಗನಾಗಿದ್ದನು.

ಪ್ರಕರಣದ ಹಿನ್ನೆಲೆ:

ಆರೋಪಿ ಮಹಿಳೆ ಅನಿತಾ, ಕಳೆದ ವರ್ಷ ಡಿಸೆಂಬರ್ ನಲ್ಲಿ ಜೈಸ್ವಾಲ್ ಅವರ ಪುತ್ರನ ಜೊತೆ ವಿವಾಹವಾಗಿದ್ದರು. ಆದರೆ ಆಕೆಯ ಅತ್ತೆಯೊಂದಿಗೆ ಆಗಾಗ್ಗೆ ಕೆಲ ವಿಚಾರವಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅತ್ತೆ-ಮಾವರಿಂದ ಬೇರೆಯಾಗಿ ಆರೋಪಿ ಮಹಿಳೆ ಮತ್ತು ಆಕೆಯ ಗಂಡ ವಾಸಿಸುತ್ತಿದ್ದರು.

ಆದರೆ ಘಟನೆ ನಡೆಯುವ ಒಂದು ದಿನ ಮುಂಚೆ ಆರೋಪಿ ಅನಿತಾ, ಅತ್ತೆ ಮನೆಗೆ ಬಂದಿದ್ದಾಳೆ. ಈ ವೇಳೆ ಮನೆಯಲ್ಲಿ ಟೀ ಮಾಡಿ ಅದಕ್ಕೆ ತಾನು ಮುಂಚಿತವಾಗಿ ತಂದಿದ್ದ ವಿಷ ಬೆರೆಸುವ ಮೂಲಕ ಮನೆ ಸದಸ್ಯರಿಗೆ ನೀಡಿದ್ದಾಳೆ. ನಂತರ ಈ ದುರ್ಘಟನೆ ನಡೆದಿದೆ.

ಈ ಸಂಬಂಧ ಆಕೆಯ ಮಾವ ನೀಡಿರುವ ದೂರಿನ ಮೇರೆಗೆ ಅನಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)