ಲಖನೌ: ತನಗೆ ಹುಟ್ಟುವ ಮಗು ಗಂಡೋ? ಅಥವಾ ಹೆಣ್ಣೋ? ಎಂದು ತಿಳಿಯಲು ಐದು ಹೆಣ್ಣುಮಕ್ಕಳ ತಂದೆಯೊಬ್ಬ ಗರ್ಭಿಣಿ ಪತ್ನಿಯ ಉದರ ಸೀಳಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಬುಡಾನ್ ಜಿಲ್ಲೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಪತಿಯ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಬರೇಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮಂದುವರಿದಿದೆ. ಆರೋಪಿ ಪತಿಯನ್ನು ಪನ್ನಲಾಲ್ ಎಂದು ಗುರುತಿಸಲಾಗಿದೆ. ಈತ ಸಿವಿಲ್ ಲೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನೇಕ್ಪುರ್ ನಿವಾಸಿಯಾಗಿದ್ದು, 35 ವರ್ಷದ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಚೂಪಾದ ಸಾಧನದಿಂದ ಸೀಳಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ, ಕುಟುಂಬದ ಮೂಲಗಳು ಹೇಳುವ ಪ್ರಕಾರ, ಪನ್ನಲಾಲ್ಗೆ ಈಗಾಗಲೇ ಐದು ಹೆಣ್ಣು ಮಕ್ಕಳಿದ್ದು, ಗಂಡು ಮಗು ಆಗಬೇಕೆಂಬ ಬಯಕೆ ಇತ್ತಂತೆ. ಹೀಗಾಗಿ ಭ್ರೂಣದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳು ಉದರ ಸೀಳಿದ್ದಾನೆಂದು ಆರೋಪಿಸಿದ್ದಾರೆ.
ಸಂತ್ರಸ್ತ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದಿರುವ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದೇವೆಂದು ತಿಳಿಸಿದ್ದಾರೆ. (ಏಜೆನ್ಸೀಸ್)