ಹಾವು 
ನ್ಯೂಸ್

ಬಯಲು ಶೌಚದ ವೇಳೆ ಗುಪ್ತಾಂಗದ ಮೂಲಕದ ದೇಹ ಪ್ರವೇಶಿಸಿತಂತೆ ಹಾವು! ಇದು ಸಾಧ್ಯವೇ? ವೈದ್ಯರು ಹೇಳಿದ್ದೇನು?

ಲಖನೌ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಹೋದಾಗ ಏನಾಯಿತು ಎಂದು ವೈದ್ಯರು ಕೇಳುತ್ತಾರೆ. ಬಯಲು ಶೌಚದ ವೇಳೆ ಹಾವೊಂದು ಗುಪ್ತಾಂಗದಿಂದ ದೇಹವನ್ನು ಪ್ರವೇಶಿಸಿತು ಎಂದಿದ್ದಾನೆ. ಇದನ್ನು ಕೇಳಿ ವೈದ್ಯರೇ ದಂಗಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.

ನಡೆದಿದ್ದು ಎಲ್ಲಿ?

ಈ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಹೇಂದ್ರ ಎಂಬಾತ ಮಧ್ಯರಾತ್ರಿ ಹರ್ದೋಯ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಧಾವಿಸಿ ಬಂದನು. ಏನೆಂದು ಕೇಳಿದಾಗ ಹಾವು ದೇಹ ಪ್ರವೇಶಿಸಿದೆ ಎಂದಿದ್ದಾನೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಇದು ಸಾಧ್ಯವಾ? ಎಂದು ಹುಬ್ಬೇರಿಸಿದ್ದಾರೆ. ಬಳಿಕ ಮಹೇಂದ್ರನ ಇಡೀ ದೇಹವನ್ನು ಪರೀಕ್ಷಿಸಿದಾಗ ಹಾವಿನ ಕಡಿತವಾಗಲಿ ಅಥವಾ ಯಾವುದೇ ವಸ್ತುವಾಗಲಿ ಆತನ ದೇಹದ ಒಳಗೆ ಕಂಡುಬಂದಿಲ್ಲ.

ಇಲ್ಲ ಎಂದು ಒಪ್ಪಲು ತಯಾರಿಲ್ಲ

ಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು ನೀನು ಅಂದುಕೊಂಡಂತೆ ನಿನ್ನ ದೇಹವನ್ನು ಯಾವುದೇ ಹಾವು ಪ್ರವೇಶಿಸಿಲ್ಲ. ನಿನಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ. ಆದರೂ ವೈದ್ಯರ ಮಾತನ್ನು ನಂಬದ ಮಹೇಂದ್ರ ಅವರ ಕುಟುಂಬ ಎರಡನೇ ಅಭಿಪ್ರಾಯ ಅಥವಾ ಮತ್ತೊಮ್ಮೆ ಪರೀಕ್ಷೆಗಾಗಿ ಬೇರೊಂದು ಆಸ್ಪತ್ರೆಗೆ ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿತ್ತು.

ಮದ್ಯದ ಅಮಲು

ಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು, ಈ ಅವಾಂತರಕ್ಕೆ ಮದ್ಯದ ಅಮಲು ಕಾರಣ ಎಂದಿದ್ದಾರೆ. ಪಾನಮತ್ತನಾಗಿ ಮಹೇಂದ್ರ ಬಯಲು ಶೌಚದಲ್ಲಿ ಹಾವನ್ನು ನೋಡಿ ತನಗೆ ತಾನು ಏನೇನೋ ಕಲ್ಪನೆ ಮಾಡಿಕೊಂಡು ಈ ರೀತಿ ಆಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮರುದಿನ ಬೆಳಿಗ್ಗೆ ಆತನನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.

ವೈದ್ಯ ಹೇಳಿದ್ದೇನು?

ಡಾ. ಶೇರ್ ಸಿಂಗ್ ಪ್ರಕಾರ ಅವರ ಪ್ರಕಾರ ಮಹೇಂದ್ರನು ಮದ್ಯದ ಅಮಲಿನಲ್ಲಿ ಇರುವಂತೆ ಕಾಣುತ್ತಿದ್ದ ಮತ್ತು ಸಾಂದರ್ಭಿಕ ಹೊಟ್ಟೆ ನೋವಿನ ಬಗ್ಗೆ ದೂರು ನೀಡುತ್ತಿದ್ದನು. ಇದು ಮಾದಕವಸ್ತು ಸೇವನೆಯಿಂದ ಉಂಟಾಗುತ್ತದೆ. ಎಲ್ಲಾದರೂ ಹಾವು ಗುಪ್ತಾಂಗದ ಮೂಲಕ ದೇಹ ಸೇರುವುದುಂಟಾ? ಈವರೆಗೆ ಈ ರೀತಿಯ ಪ್ರಕರಣಗಳ ಉದಾಹರಣೆ ಇಲ್ಲ. ಈ ಘಟನೆ ಮದ್ಯದ ಅಮಲಿನಲ್ಲಿ ಆದ ಎಡವಟ್ಟು ಎಂದು ಹೇಳಿದ್ದಾರೆ. (ಏಜೆನ್ಸೀಸ್​)