ನ್ಯೂಸ್

11ರ ಬಾಲಕಿ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ರೇಪ್: ಅಪ್ರಾಪ್ತೆಗೆ ಹುಟ್ಟಿದ ಮಗು ಕೆಲವೇ ಕ್ಷಣಗಳಲ್ಲಿ ಸಾವು! UP Girl

UP Girl : ಪದೇಪದೆ ಅತ್ಯಾಚಾರ ಮತ್ತು ಬೆದರಿಕೆಗೆ ಒಳಗಾಗಿದ್ದ 11 ವರ್ಷದ ಬಾಲಕಿಯೊಬ್ಬಳು ಅಕಾಲಿಕವಾಗಿ ಮಗುವಿಗೆ ಜನ್ಮ ನೀಡಿದ್ದು, ಆ ಮಗು ಕೆಲವೇ ಕ್ಷಣಗಳಲ್ಲಿ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಪ್ರಾಪ್ತೆ ಏಳು ತಿಂಗಳ ನಂತರ ಮಗುವಿಗೆ ಜನ್ಮ ನೀಡಿದ್ದು, ಹುಟ್ಟಿದ ಅರ್ಧ ಗಂಟೆಯಲ್ಲೇ ಮಗು ಮೃತಪಟ್ಟಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಅಮಾಯಕ ಬಾಲಕಿಯ ಮೇಲೆ ಪದೇಪದೆ ಅತ್ಯಾಚಾರ ಎಸಗಿ, ಲೈಂಗಿಕ ಸಂಬಂಧವನ್ನು ಮುಂದುವರಿಸಲು ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಹೊತ್ತಿರುವ ಎರಡು ಮಕ್ಕಳ ತಂದೆಯಾದ 31 ವರ್ಷದ ರಶೀದ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಶನಿವಾರ (ಸೆ.06) ಬಂಧಿಸಲಾಗಿದೆ.

ಶುಕ್ರವಾರ (ಸೆ.05) ರಶೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನವಾಬ್‌ಗಂಜ್ ಸ್ಟೇಷನ್ ಹೌಸ್ ಅಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಅವರು ದೃಢಪಡಿಸಿದ್ದಾರೆ. ಆರೋಪಿಯೊಂದಿಗೆ ಹೊಂದಾಣಿಕೆಗೆ ಸಾಕ್ಷಿಯಾಗಿ ಮಗುವಿನ ಡಿಎನ್‌ಎ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಹಿರಿಯ ಸಹೋದರ ನೀಡಿರುವ ಹೇಳಿಕೆ ಪ್ರಕಾರ, ಆರೋಪಿ ರಶೀದ್, ಆರೇಳು ತಿಂಗಳ ಹಿಂದೆ ಹಣ್ಣು ಕೊಡಿಸುವುದಾಗಿ ನಂಬಿಸಿ, ಆಕೆಯನ್ನ ತನ್ನ ಮನೆಗೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಇದಾದ ನಂತರ, ಯಾರಿಗಾದರೂ ಈ ಬಗ್ಗೆ ಹೇಳಿದರೆ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅಪ್ರಾಪ್ತೆಯ ಬೆತ್ತಲೆ ವಿಡಿಯೋ ಮಾಡಿಕೊಂಡು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದದಿದ್ದರೆ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿ, ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಗುರುವಾರ (ಸೆ.04) ಬಾಲಕಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಈ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿಸಲಾಯಿತು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಲಾಗಿದೆ. ಆ ಪರೀಕ್ಷೆಯಲ್ಲಿ ಬಾಲಕಿ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಬಳಿಕ ಅಪ್ರಾಪ್ತೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಆಕೆ ಅದೇ ದಿನ ಮಗುವಿಗೆ ಜನ್ಮ ನೀಡಿದಳು. ಆದರೆ, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ಸಾವಿಗೀಡಾಗಿದೆ.

ಸಾಕಷ್ಟು ರಕ್ತದ ನಷ್ಟ ಮತ್ತು ಅಕಾಲಿಕ ಗರ್ಭಾವಸ್ಥೆಯಿಂದಾಗಿ ಬಾಲಕಿಯ ಸ್ಥಿತಿಯೂ ತುಂಬಾ ಗಂಭೀರವಾಗಿತ್ತು. ಆದರೆ, ಈಗ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆಯ ಸಿಎಂಎಸ್ ಡಾ. ತ್ರಿಭುವನ್ ಪ್ರಸಾದ್ ತಿಳಿಸಿದ್ದಾರೆ. (ಏಜೆನ್ಸೀಸ್​)